ಎಸ್.ಡಿ.ಎಂ.ಕಾಲೇಜು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಹೊನ್ನಾವರ : ಪಟ್ಟಣದ ಎಸ್.ಡಿ.ಎಂ.ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲೂಕಿನ ವಿವಿಧ ಇಲಾಖೆ ಹಾಗೂ ತಾಲೂಕ ಯುವ ಒಕ್ಕೂಟದ ವತಿಯಿಂದ ತಾಲೂಕ ಮಟ್ಟದ ದಸರಾ ಕ್ರೀಡಾಕೂಟ ಶನಿವಾರ ನಡೆಯಿತು.

ಕ್ರೀಡಾಕೂಟಕ್ಕೆ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಧ್ವಜಾರೋಹಣ ನೇರವೇರಿಸುವ ಮೂಲಕ ಚಾಲನೆ ನೀಡಿ, ಇಂದು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿದವರು ಪ್ರಥಮವಾಗಿ ಇಂತಹ ಕ್ರೀಡೆಯಲ್ಲಿ ಭಾಗವಹಿಸಿಯೇ ಅಂತಹ ಸಾಧನೆಗೆ ಕಾರಣರಾಗಿದ್ದಾರೆ. ಸೋಲು ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುದು ಮುಖ್ಯ. ಒಂದು ಗುರಿ ಇಟ್ಟು ಸ್ಪರ್ಧೆ ನೀಡಿದರೆ ಸಾಧನೆ ಮಾಡಲು ಖಂಡಿತಾ ಸಾಧ್ಯ. ತಾಲೂಕಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದ ಸಾಧನೆ ಮಾಡುವ ಮೂಲಕ ಕೀರ್ತಿ ತರುವಂತೆ ಶುಭಹಾರೈಸಿದರು.

ತಹಶೀಲ್ದಾರ ನಾಗರಾಜ ನಾಯ್ಕಡ್ ಮಾತನಾಡಿ, ಗ್ರಾಮೀಣ ಭಾಗದ ಹಲವು ಕ್ರೀಡಾಪಟುಗಳಿಗೆ ಸಿಗುವ ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಕ್ರೀಡಾಮನೋಭಾವದಿಂದ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕ್ರೀಡಾ ಕಾರ್ಯಕ್ರಮಗಳು ಜರುಗಿದವು. ವೇದಿಕೆಯಲ್ಲಿ ಪ.ಪಂ ಉಪಾಧ್ಯಕ್ಷೆ ನಿಶಾ ಶೇಟ್, ಎಸ್.ಡಿ.ಎಂ.ಕಾಲೇಜಿನ ದೈಹಿಕ ಶಿಕ್ಷಕ ನಿರ್ದೆಶಕ ಆರ್.ಕೆ ಮೇಸ್ತ, ಎಎಸೈ ಗಿರೀಶ ಶೆಟ್ಟಿ, ದೈಹಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷೆ ಸಾಧನಾ ಬರ್ಗಿ, ಪ್ರೌಡಶಾಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಬಾಬು ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.