ಶಿರಸಿ: ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಪೋಕ್ಸೋ ಪ್ರಕರಣದಡಿ ಬಂಧಿತರಾಗುತಿದ್ದಂತೆ ಶ್ರೀಗಳು ಮೊದಲು ದೀಕ್ಷೆ ಪಡೆದು ಸೇವೆ ಸಲ್ಲಿಸಿದ್ದ ಶಿರಸಿಯ ಶ್ರೀ ರುದ್ರದೇವರ ಮಠದಲ್ಲಿ ಸದ್ಯ ನೀರವ ಮೌನ ಆವರಿಸಿದೆ. ಭಕ್ತಾದಿಗಳಿಲ್ಲದೇ ಮಠಕ್ಕೆ ಬೀಗ ಹಾಕಲಾಗಿದೆ.
ಸ್ಥಬ್ಧವಾದ ಮಠದ ಕಾರ್ಯಚಟುವಟಿಕೆ.!
ಚಿತ್ರದುರ್ಗದ ಮುರುಘಾ ಶರಣರು ಫೋಕ್ಸೋ ಕಾಯ್ದೆಯಡಿ ಬಂಧಿತರಾಗುತಿದ್ದಂತೆ ಇದೀಗ ಅವರು ಮೊದಲ ಬಾರಿಗೆ ಮಠಾಧೀಶರಾಗಿ ಪಟ್ಟಾಭಿಷೇಕಗೊಂಡು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಶಿರಸಿಯ ಶ್ರೀ ರುದ್ರದೇವರ ಮಠದಲ್ಲಿ ನಿರವ ಮೌನ ಆವರಿಸಿದೆ. ಮಠದ ಕಾರ್ಯಚಟುವಟಿಕೆ ಸ್ಥಬ್ಧಗೊಂಡು ಇದೀಗ ಮಠಕ್ಕೆ ಬೀಗ ಬಿದ್ದಿದೆ. ಸದಾ ಒಂದಲ್ಲಾ ಒಂದು ಧಾರ್ಮಿಕ ಕಾರ್ಯಚಟುವಟಿಕೆ ನಡೆಯುತಿದ್ದ ಈ ಮಠದಲ್ಲಿ ಮುರುಘಾ ಶ್ರೀ ಬಂಧನ ಬರಸಿಡಿಲು ಬಡಿದಂತಾಗಿದ್ದು, ಮಠದಲ್ಲಿ ಯಾವ ಭಕ್ತರೂ ಸಹ ಕಾಣಿಸದೇ ಖಾಲಿ ಖಾಲಿ ಹೊಡೆಯುತ್ತಿದೆ.
1979 ರಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಯಿಂದ ಪಟ್ಟಾಭಿಷೇಕ: 8 ವರ್ಷ ಮಠದಲ್ಲೇ ಸೇವೆ ಸಲ್ಲಿಸಿದ್ದ ಮುರುಘಾ ಶ್ರೀ
ಶಿರಸಿಯ ಶ್ರೀ ರುದ್ರದೇವರ ಮಠದಲ್ಲಿ 1979 ರಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಮುರುಘಾ ಶರಣರಿಗೆ ದೀಕ್ಷೆ ನೀಡಿದ್ದರು. ನಂತರ ಶ್ರೀಗಳು ಅದೇ ಮಠದಲ್ಲಿ ಪಟ್ಟಾಭಿಷೇಕಗೊಂಡಿದ್ದರು. ಶಿರಸಿಯಲ್ಲೇ ಇದ್ದ ಅವರು ಎಂಟು ವರ್ಷಗಳ ಕಾಲ ಈ ಮಠದಲ್ಲಿ ಸೇವೆ ಸಲ್ಲಿಸಿ ನಂತರ ಹಾವೇರಿಯ ಹೊಸಮಠಕ್ಕೆ ಸ್ವಾಮೀಜಿಯಾಗಿ ನೇಮಕಗೊಂಡಿದ್ದರು.
ಭಕ್ತರಿಲ್ಲದೇ ಬಿಕೋ ಎನ್ನುತ್ತಿರುವ ಶಿರಸಿಯ ರುದ್ರದೇವರ ಮಠ
ತಮ್ಮ ಕ್ರಾಂತಿದಾಯಕ ಹೆಜ್ಜೆಯಿಂದ ಜನ ಮನ್ನಣೆ ಗಳಿಸಿ ನಂತರ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿಯಾಗಿ ನೇಮಕಗೊಂಡು ಹೆಸರು ಮಾಡಿದರು. ಇದೀಗ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಮುರುಘಾ ಶ್ರೀ ಬಂಧಿತರಾಗಿದ್ದು ಇವರ ಬಂಧನದಿಂದ ಶಿರಸಿಯಲ್ಲಿನ ಮಠದ ಕಾರ್ಯಚಟುವಟಿಕೆ ಸ್ಥಬ್ಧವಾಗಿದೆ. ಭಕ್ತರಿಲ್ಲದೇ ಮಠ ಖಾಲಿ ಹೊಡೆಯುತ್ತಿದೆ.
ನಿರಪರಾಧಿಯಾಗಿ ಹೊರಬರುತ್ತಾರೆ ಎಂದ ಭಕ್ತರು.!
ಇನ್ನು ಸ್ವಾಮೀಜಿಯ ಸಂಪರ್ಕವಿಟ್ಟುಕೊಂಡ ಅನೇಕ ಭಕ್ತರು ಸ್ವಾಮೀಜಿ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ. ಒಂದು ಸಮಾಜಕ್ಕೆ ಸೀಮಿತವಾಗದೇ ಕ್ರಾಂತಿದಾಯಕ ಹೆಜ್ಜೆ ಇಟ್ಟು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಿದ ಅವರು ಎಂದೂ ತಪ್ಪು ಮಾಡುವುದಿಲ್ಲ. ಅವರು ಮರಳಿ ನಿರಪರಾಧಿಯಾಗಿ ಬರುತ್ತಾರೆ ಎಂಬ ನಂಬಿಕೆ ಇದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.