ಖರ್ವಾ ಶಾಲೆಯಲ್ಲಿ ‘ಶಾಲಾ ಶತಮಾನೋತ್ಸವದ ಪೂರ್ವಭಾವಿ ಸಭೆ’

ಹೊನ್ನಾವರ: ತಾಲೂಕಿನ ಖರ್ವಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ’ಶಾಲಾ ಶತಮಾನೋತ್ಸವ ಪೂರ್ವಭಾವಿ ಸಭೆ’ ಶಾಲಾ ಆವಾರದಲ್ಲಿ ನಡೆಯಿತು.

ಶಾಲಾ ಎಸ್.ಡಿ.ಎಮ್.ಸಿ ಕರೆದ ಸಭೆಯಲ್ಲಿ ಶಾಲೆಯ ಪೂರ್ವ ವಿದ್ಯಾರ್ಥಿಗಳು, ಊರ ಹಿರಿಯರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೆ, ಪ್ರತಿಭೆಗಳಿಗೆ ಗೌರವ ಸನ್ಮಾನ ಮಾಡಬೇಕೆಂದು ನಿರ್ಣಯಿಸಲಾಯಿತು. ಶಾಲೆಗೆ ಸಭಾಭವನ ಅವಶ್ಯಕತೆ ಇದ್ದು, ಶತಮಾನೋತ್ಸವ ಪೂರ್ವವಾಗಿ ನೂತನ ಸಭಾಭವನ ನಿರ್ಮಿಸಿ ಅದರಲ್ಲೇ ಶತಮಾನೋತ್ಸವ ಕಾರ್ಯಕ್ರಮ ನಡೆಸಬೇಕೆಂದು ಒಮ್ಮತದ ನಿರ್ಣಯ ತೆಗೆದುಕೊಂಡರು. ಶತಮಾನೋತ್ಸವ ಆಚರಿಸುವ ನಿಮಿತ್ತ ಶಾಲಾ ಪೂರ್ವ ವಿದ್ಯಾರ್ಥಿಗಳ ಸಮಿತಿ ರಚಿಸಿ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಗುತ್ತಿಗೆದಾರರಾದ ರಾಮಪ್ಪ ನಾಯ್ಕ ಮಾತನಾಡಿ, ಕಲಿತ ಶಾಲೆ ದೇವಾಲಯವಿದ್ದಂತೆ. ನಾವೆಲ್ಲಾ ಈ ಶಾಲೆಗಾಗಿ ಸೇವೆ ಸಲ್ಲಿಸುವುದು ದೇವರ ಕಾರ್ಯದಲ್ಲಿ ಪಾಲ್ಗೊಂಡಂತೆ ಎನ್ನುವ ಮನೋಭಾವದಿಂದ ಶತಮಾನೋತ್ಸವ ಆಚರಿಸಬೇಕು. ಎಲ್ಲಾ ಪೂರ್ವ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ತನು-ಮನ-ಧನಗಳಿಂದ ಸಹಕರಿಸಿ ಎಂದು ಕೋರಿದರು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಮುಂಬರುವ ದಿನಗಳಲ್ಲಿ ಶಾಲಾ ಶತಮಾನೋತ್ಸವಕ್ಕೆ ಪೂರ್ವ ವಿದ್ಯಾರ್ಥಿಗಳು ಹಾಗೂ ಊರನಾಗರಿಕರು ಕೈಜೋಡಿಸಬೇಕು. ಪ್ರತಿಯೊಬ್ಬರು ವಿವಿಧ ರೀತಿಯ ಜವಾಬ್ದಾರಿ ಪಡೆದು ಸಹಕರಿಸಬೇಕು. ಸಕಾಲಕ್ಕೆ ಸಲಹೆ, ಸಹಕಾರ ನೀಡಬೇಕು. ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಅಲ್ಪ ಸಮಯವಾದರು ಮೀಸಲಿಟ್ಟು ಯಶಸ್ವಿಯಾಗಲು ಸಹಕರಿಸಬೇಕು ಎಂದರು.

ವೇದಿಕೆಯಲ್ಲಿ ಗ್ರಾ,ಪಂ ಉಪಾಧ್ಯಕ್ಷ ಶ್ರೀಧರ್ ನಾಯ್ಕ, ಸದಸ್ಯ ಸಂತೋಷ್ ನಾಯ್ಕ, ಜೇಮ್ಸ್ ಲೋಫಿಸ್, ಮಂಜುನಾಥ ಗೌಡ, ಸಂತೋಷ್ ಕಡಗೇರಿ, ಸಲೀಮ್ ವಲ್ಕಿ, ಪ್ರಕಾಶ್ ನಾಯ್ಕ, ಗಣಪತಿ ಹಳ್ಳೇರ್ ಉಪಸ್ಥಿತರಿದ್ದರು.