ಅಂಕೋಲಾ: ತಾಲೂಕಿನ ಗುಂಡಬಾಳಾ ಗ್ರಾಮದಲ್ಲಿ 25 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ವನಮಹೋತ್ಸವ ನಡೆಯಿತು. ಈ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಉದ್ಘಾಟಿಸಿದರು.
ನಂತರ ಮಾತನಾಡಿ, ಗಿಡ ನೆಟ್ಟು ಬೆಳೆಸುವುದರಿಂದ ನಮಗೆ ಒಳ್ಳೆಯ ಗಾಳಿ, ಮಳೆ, ಉರುವಲಿಗೆ ಸೌದೆ ಸೇರಿದಂತೆ ಅನೇಕ ಪ್ರಯೋಜನವಾಗುತ್ತದೆ. ಗಿಡ ಕಡಿಯುವ ಬದಲು ಎಲ್ಲರೂ ಗಿಡ ನೆಡೋಣ. ಗುಂಡಬಾಳಾ ಗ್ರಾಮದವರು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿ ಎಂದರು.
ಸಂಘಟಕ ರಮಾನಂದ ನಾಯ್ಕ ಮಾತನಾಡಿ, ಬೆಳ್ಳಿ ಮಹೋತ್ಸವದ ಪ್ರಯುಕ್ತ ನಾವು ಯಕ್ಷಗಾನ, ಅನ್ನದಾನ, ಗುಮ್ಮಟೆ ವಾದ್ಯ ನುಡಿಸುವ ಕಾರ್ಯಕ್ರಮಗಳ ಹಮ್ಮಿಕೊಂಡಿದ್ದೇವೆ. ಅದರ ಜೊತೆಗೆ ಜನರಲ್ಲಿ ಪರಿಸರ ಮತ್ತು ಸ್ವಚ್ಚತೆಯ ಅರಿವು ಮೂಡಿಸಲು ಇವತ್ತು ವನಮಹೋತ್ಸವ ಮತ್ತು ನಾಳೆ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಉಪ ವಲಯ ಅರಣ್ಯಾಧಿಕಾರಿ ಸತೀಶ್ ಕಾಂಬ್ಳೆ, ರಾಘವೇಂದ್ರ ಜೀರಗಾಳೆ, ಉದ್ದಿಮೆದಾರರಾದ ಮುಕುಂದ ನಾಯ್ಕ,
ಶಿಕ್ಷಕರಾದ ಸಿಣ್ಣಾ ಗಾಂವಕರ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಂಡಬಾಳಾದ ಅಧ್ಯಕ್ಷರಾದ ಅನಿಲ್ ನಾಯ್ಕ, ಉಪಾಧ್ಯಕ್ಷರಾದ ಸಂತೋಷ್ ಗೌಡ, ಚಂದ್ರಹಾಸ ಗೌಡ ಸೇರಿದಂತೆ ಅರಣ್ಯ ಇಲಾಖೆಯವರು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.