ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ, ಶಿಕ್ಷಣ ತಜ್ಞರಾದ ಪ್ರೊ.ಎಂ.ಎಸ್.ತಿಮ್ಮಪ್ಪ (83) ನಿಧನರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಇವರು ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ, ಇಂದು ಬೆಳಗಿನ ಜಾವ 1.50ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದ್ದ ತಿಮ್ಮಪ್ಪ ಅವರು ಎರಡು ಅವಧಿಗೆ ಬೆಂಗಳೂರು ವಿ.ವಿಯ ರಿಜಿಸ್ಟ್ರಾರ್ ಹಾಗೂ ಉಪಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದು, ಹಲವು ಡಾಕ್ಟರೇಟ್ ಮತ್ತು ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಸಾಕಷ್ಟು ವರ್ಷಗಳ ಕಾಲ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
2000ರಲ್ಲಿ ಪುತ್ರಿ ಹಾಗೂ 2007ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ತಿಮ್ಮಪ್ಪ, ನಿವೃತ್ತಿಯ ನಂತರ ಒಂಟಿಯಾಗಿ ವಾಸಿಸುತ್ತಿದ್ದರು. ಪ್ರೇರಣಾದಾಯಕ ವ್ಯಕ್ತಿಯಾಗಿದ್ದು ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದರು ಎಂದು ಬೆಂಗಳೂರು ವಿ.ವಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.