ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. 4 ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿದ್ದು, 2-1 ಅಂತರದಿಂದ ಸರಣಿ ಮುನ್ನಡೆ ಸಾಧಿಸಿದೆ. ನಿನ್ನೆ ನಡೆದ 3ನೇ ಪಂದ್ಯದಲ್ಲಿ ಭಾರತ ವಿಶ್ವದಾಖಲೆಯನ್ನೂ ಬರೆಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ, ತಿಲಕ್ ವರ್ಮಾ (107) ಶತಕ ಮತ್ತು ಅಭಿಷೇಕ್ ಶರ್ಮಾ (50) ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಕಲೆ ಹಾಕಿತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 208 ರನ್ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೀಂ ಇಂಡಿಯಾ 11 ರನ್ಗಳ ಗೆಲುವು ಸಾಧಿಸಿತು.
ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಸಿಕ್ಸರ್: ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 13 ಸಿಕ್ಸರ್ಬಾರಿಸಿತು. ಇದರೊಂದಿಗೆ ಒಂದೇ ವರ್ಷದಲ್ಲಿ ಅಂದರೆ, 2024ರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದೆ. ಇದಕ್ಕೂ ಮೊದಲು ಈ ದಾಖಲೆ ವೆಸ್ಟ್ ಇಂಡೀಸ್ ಹೆಸರಲ್ಲಿತ್ತು. ಈ ವರ್ಷ ಒಟ್ಟು 21 ಟಿ20 ಪಂದ್ಯಗಳನ್ನು ಆಡಿರುವ ವೆಸ್ಟ್ ಇಂಡೀಸ್ 201 ಸಿಕ್ಸರ್ಗಳನ್ನು ಸಿಡಿಸಿತ್ತು. ಇದೀಗ ಟೀಂ ಇಂಡಿಯಾ ಇದನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು 25 ಟಿ20 ಪಂದ್ಯಗಳನ್ನು ಆಡಿರುವ ಭಾರತ 214 ಸಿಕ್ಸರ್ ಸಿಡಿಸಿದೆ.
ವಿದೇಶಿ ನೆಲದಲ್ಲಿ 100ನೇ ಗೆಲುವು: ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟಿ20 ಪಂದ್ಯ ಗೆಲುವು ಸಾಧಿಸುತ್ತಿದ್ದಂತೆ ಭಾರತ ಮತ್ತೊಂದು ದಾಖಲೆ ಬರೆದಿದೆ. ವಿದೇಶಿ ನೆಲದಲ್ಲಿ ಇದುವರೆಗೂ ಒಟ್ಟು 152 ಪಂದ್ಯಗಳನ್ನು ಆಡಿದ್ದು ಇದರಲ್ಲಿ 100 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ತವರಿನಿಂದ ಹೊರಗೆ ನಡೆದ ಪಂದ್ಯಗಳಲ್ಲಿ ಹೆಚ್ಚು ಗೆಲುವು ಸಾಧಿಸಿದ ಎರಡನೇ ತಂಡವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ. ಪಾಕ್ ಇದುವರೆಗೂ ಒಟ್ಟು 203 ಪಂದ್ಯಗಳನ್ನು ಆಡಿದ್ದು 116 ಪಂದ್ಯಗಳಲ್ಲಿ ಜಯಿಸಿದೆ.
ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನ ಇದ್ದು ಇದುವೆೃರೆಗೂ ವಿದೇಶಿ ನೆಲದಲ್ಲಿ 138 ಪಂದ್ಯಗಳನ್ನು ಆಡಿದೆ. ಇದರಲ್ಲಿ 84 ಪಂದ್ಯಗಳನ್ನು ಜಯಿಸಿದೆ. ಆಸ್ಟ್ರೇಲಿಯಾ 137 ಪಂದ್ಯಗಳನ್ನಾಡಿ 71 ಗೆಲುವು, ಇಂಗ್ಲೆಂಡ್ 129 ಪಂದ್ಯಗಳಲ್ಲಿ 67 ಗೆಲುವು ಸಾಧಿಸಿ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.