ಸಾವಿನಲ್ಲೂ ಸಾರ್ಥಕತೆ ಮೆರೆದ ಮಾಸ್ತಮ್ಮ.! ಉಡುಪಿಯ ಪ್ರಸಾದ ನೇತ್ರಾಲಯಕ್ಕೆ ಕಣ್ಣುಗಳ ದಾನ.!

ಭಟ್ಕಳ: ಅನಾರೋಗ್ಯದಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತಾಯಿಯ ಕಣ್ಣನ್ನು ದಾನ ಮಾಡುವ ಮೂಲಕ ಮಗ ಸಾರ್ಥಕತೆ ಮೆರೆದಿದ್ದಾನೆ. ಶಿರಾಲಿಯ ಮತ್ತಿಗುಂಡಿ ನಿವಾಸಿ ಮಾಸ್ತಮ್ಮ ವೆಂಕಟಪ್ಪ ನಾಯ್ಕ (68) ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರದ ವೃದ್ಧೆ.

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಆ. 21 ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಮಗ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾಸ್ತಮ್ಮ ಇಂದು ಸಾವನ್ನಪ್ಪಿದ್ದಾರೆ. ತಾಯಿಯ ಸಾವಿನ ಬಳಿಕ ಮತ್ತೊಬ್ಬರಿಗೆ ತನ್ನ ತಾಯಿಯ ಕಣ್ಣು ಬೆಳಕಾಗಲಿ ಎಂಬ ಉದ್ದೇಶದಿಂದ ಕುಟುಂಬದವರ ಒಪ್ಪಿಗೆ ಪಡೆದ ಮಗ ಮಂಜುನಾಥ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಲಕ ಉಡುಪಿಯ ಪ್ರಸಾದ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದಾನೆ.

ಮಾಹಿತಿ ತಿಳಿದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದ ಉಡುಪಿಯ ಪ್ರಸಾದ ನೇತ್ರಾಲಯ ತಂಡ ನಿಯಮದ ಪ್ರಕಾರ ಕಣ್ಣನ್ನು ತೆಗದುಕೊಂಡು ತೆರಳಿದ್ದಾರೆ. ಈ ನೇತ್ರದಾನ ಪ್ರಕ್ರಿಯೆಯಲ್ಲಿ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಸಹಕರಿಸಿದರು.

ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ ಸಾವಿನ ನಂತರ ನೇತ್ರದಾನ ಮಾಡಿ ರಾಜ್ಯದ  ಜನತೆಗೆ ಪ್ರೇರಣೆಯಾಗಿದ್ದರು. ಅದೇ ರೀತಿ ಭಟ್ಕಳದಲ್ಲಿ ಸ್ಪಂದನ ಚಾರಿಟೇಬಲ್ ಟ್ರಸ್ಟ್ ಭಟ್ಕಳ ವತಿಯಿಂದ ಬ್ರಹತ್ ನೇತ್ರದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡು ಭಟ್ಕಳ ಜನತೆಗೆ ಪ್ರೇರಣೆಯಾಗಿದ್ದರು. ಈ ಕಾರ್ಯಕ್ರಮದ ಬಳಿಕ ಭಟ್ಕಳದಲ್ಲಿ ಇದೇ ಮೊದಲ ಬಾರಿಗೆ ನೇತ್ರದಾನ ಮಾಡಿದ ಇತಿಹಾಸ ಸೃಷ್ಟಿಯಾಗಿದೆ.