ಹೊನ್ನಾವರ: ಕನ್ನಡ ಭಾಷೆಯನ್ನು ಜನಸಾಮಾನ್ಯರು ಉಳಿಸಿ ಬೆಳೆಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಕನ್ನಡದ ಕಟ್ಟಾಳುಗಳಾಗಿ ಬೆಳೆಯಬೇಕು ಎಂದು ಹಿರಿಯ ಸಾಹಿತಿ ಡಾ. ಎನ್.ಆರ್.ನಾಯಕ ಹೇಳಿದರು. ಪಟ್ಟಣದ ಪ್ರಭಾತನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಆಯೋಜಿಸಿದ ‘ಶಾಲೆಗಳತ್ತ ಸಾಹಿತಿಗಳು’ ಕಾರ್ಯಕ್ರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನಸಾಮಾನ್ಯರ ನಡುವೆ ಜೀವನ ಮೌಲ್ಯಗಳನ್ನು ಕಲಿತು ನಾನು ಬೆಳೆದು ಬಂದಿದ್ದೇನೆ. ಕನ್ನಡ ಭಾಷೆಗೆ ದೊಡ್ಡ ಪರಂಪರೆ ಮತ್ತು ಘನತೆಯಿದೆ. ಆ ಪರಂಪರೆಯನ್ನು ಮುಂದಿನ ತಲೆಮಾರಿನ ಜನರು ಕಾಪಾಡಿಕೊಂಡು ಹೋಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಡಾ. ಎನ್.ಆರ್.ನಾಯಕ ಅವರು ನಡೆದಾಡುವ ವಿಶ್ವ ವಿದ್ಯಾನಿಲಯವಿದ್ದಂತೆ. ಅವರು ಸಾಹಿತ್ಯ ಲೋಕಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ನೆಲದ ಸಾಹಿತಿಗಳನ್ನು ಗೌರವಿಸುವ ಕೆಲಸ ಎಲ್ಲರಿಂದ ಆಗಬೇಕಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಥಳಿಯ ಸಾಹಿತಿಗಳ ಮಾಹಿತಿ ಮತ್ತು ಮಾರ್ಗದರ್ಶನ ಅಗತ್ಯವಿದೆ. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳಿಯ ಸಾಹಿತಿಗಳನ್ನು ಪರಿಚಯಿಸುವ ಪರಿಣಾಮಕಾರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷ ನಾರಾಯಣ ಹೆಗಡೆ, ಶಿಕ್ಷಕಿ ಆಶಾ ಪೈ ಹಾಗೂ ಮತ್ತಿತರು ಉಪಸ್ಥಿತರಿದ್ದರು.