ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣ – ಛತ್ತೀಸ್‌ಗಢದಲ್ಲಿ ಆರೋಪಿ ಅರೆಸ್ಟ್

ರಾಯಪುರ: ಬಾಲಿವುಡ್ ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್‌ಗಢ ರಾಯಪುರದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಕೀಲ ಮೊಹಮ್ಮದ್ ಫೈಜಾನ್ ಖಾನ್ ಎಂದು ಗುರುತಿಸಲಾಗಿದೆ.

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಕರೆಯೊಂದು ಬಂದಿತ್ತು. ನ.5 ರಂದು ಮಧ್ಯಾಹ್ನ 1:20ರ ಸುಮಾರಿಗೆ ಮುಂಬೈನ ಬಾಂದ್ರಾ ಪೊಲೀಸರಿಗೆ ಕರೆ ಮಾಡಿ ವ್ಯಕ್ತಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

ಛತ್ತೀಸ್‌ಗಢದ ರಾಯಪುರದ ಫೈಜಾನ್ ಖಾನ್ ಎಂಬುವರ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಫೈಜಾನ್ ಖಾನ್ ಅವರನ್ನು ಪೊಲೀಸರು ವಿಚಾರಣೆಗೆ ಕರೆಯಿಸಿದ್ದರು. ವಿಚಾರಣೆಯಲ್ಲಿ ತಾನು ವಕೀಲನಾಗಿದ್ದು, ನ.2 ರಂದು ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ. ಶಾರುಖ್ ಖಾನ್‌ಗೆ ಬೆದರಿಕೆ ಹಾಕಲು ಯಾರೋ ಅದನ್ನು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಹೇಳಿದ್ದನು.

ಅದಾದ ಬಳಿಕ ತನಗೆ ಬೆದರಿಕೆ ಬರುತ್ತಿರುವ ಹಿನ್ನೆಲೆ ಸುರಕ್ಷತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದ. ಜೊತೆಗೆ ಸುರಕ್ಷತೆಯ ನೆಪದಲ್ಲಿ ಎರಡು ಬಾರಿ ವಿಚಾರಣೆಗೆ ಗೈರು ಹಾಜರಾಗಿದ್ದ. ಇದೀಗ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ 308(4), 351(3)(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿತ್ತು. ಅದಾದ ಬಳಿಕ ಅವರ ಭದ್ರತೆಯನ್ನು Y+ ಮಟ್ಟಕ್ಕೆ ಹೆಚ್ಚಿಸಲಾಯಿತು. ದಿನದ 24 ಗಂಟೆ ಆರು ಶಸ್ತ್ರಸಜ್ಜಿತ ಸಿಬ್ಬಂದಿಗಳ ಜೊತೆಯಲ್ಲಿ ಇರುವುದನ್ನು ಖಚಿತಪಡಿಸುತ್ತದೆ. ಇದಕ್ಕೂ ಮೊದಲು ಶಾರುಖ್ ಖಾನ್ ಇಬ್ಬರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳನ್ನು ಹೊಂದಿದ್ದರು.