Team India: ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಆಸೀಸ್ ಪಡೆಯು 414 ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ, 232 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಇನ್ನು 397 ಗೆಲುವು, 325 ಸೋಲುಗಳೊಂದಿಗೆ ಇಂಗ್ಲೆಂಡ್ ತಂಡ 2ನೇ ಸ್ಥಾನದಲ್ಲಿದ್ದರೆ, ಇದೀಗ 179 ಜಯದೊಂದಿಗೆ ಟೀಮ್ ಇಂಡಿಯಾ ಮೂರನೇ ಸ್ಥಾನಕ್ಕೇರಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವು ಹೊಸ ಇತಿಹಾಸ ಸೃಷ್ಟಿಸಿದೆ. ಅದು ಸಹ ಗೆಲುವು-ಸೋಲುಗಳ ಲೆಕ್ಕಾಚಾರಗಳೊಂದಿಗೆ ಎಂಬುದು ವಿಶೇಷ. ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಸೋಲಿಗಿಂತ ಗೆಲುವಿನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಇದಾಗ್ಯೂ ಡ್ರಾ ಪಂದ್ಯಗಳ ಫಲಿತಾಂಶದಲ್ಲಿ ಹಿಂದೆ ಉಳಿದಿದೆ.
ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿನ ಬೆನ್ನಲ್ಲೇ ಭಾರತ ತಂಡವು ಟೆಸ್ಟ್‌ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು ಸಾಧಿಸಿದ ವಿಶ್ವದ ನಾಲ್ಕನೇ ತಂಡ ಎನಿಸಿಕೊಂಡಿತ್ತು. ಈ ಮೂಲಕ ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ್ ಬಳಿಕ ಈ ಸಾಧನೆ ವಿಶೇಷ ದಾಖಲೆ ಬರೆದಿದೆ.
1932 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಭಾರತ ತಂಡವು ಈವರೆಗೆ 580 ಪಂದ್ಯಗಳನ್ನಾಡಿದೆ. ಈ ವೇಳೆ 179 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 178 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು 222 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಅಂದರೆ ಭಾರತ ತಂಡವು ಟೆಸ್ಟ್‌ನಲ್ಲಿ ಪಂದ್ಯ ಗೆದ್ದಿರುವುದಕ್ಕಿಂತ ಡ್ರಾ ಸಾಧಿಸಿದ್ದೇ ಹೆಚ್ಚು. ಇದೀಗ ಈ ದಾಖಲೆ ಮುರಿಯುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.
ಏಕೆಂದರೆ 2013 ರಿಂದ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿ ಸೋತಿಲ್ಲ. ಈ ಗೆಲುವಿನ ನಾಗಾಲೋಟದೊಂದಿಗೆ ಭಾರತ ತಂಡವು ಶೀಘ್ರದಲ್ಲೇ ಟೆಸ್ಟ್‌ನಲ್ಲಿ 200 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಲಿದೆ. ಏಕೆಂದರೆ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ಗಳನ್ನಾಡಲಿದೆ.
ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕನಿಷ್ಠ ಐದಾರು ಪಂದ್ಯಗಳನ್ನು ಗೆದ್ದರೂ ಭಾರತ ತಂಡದ ಗೆಲುವಿನ ಸಂಖ್ಯೆ 185 ಕ್ಕೆ ತಲುಪಲಿದೆ. ಅಲ್ಲದೆ 2025 ರ ಟೆಸ್ಟ್ ಸರಣಿಗಳ ಮೂಲಕ ಟೀಮ್ ಇಂಡಿಯಾ ಗೆಲುವಿನ ಸಂಖ್ಯೆಯನ್ನು 200 ಕ್ಕೇರಿಸಬಹುದು. ಸದ್ಯ 179 ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಡ್ರಾ ಪಂದ್ಯಗಳ ಸಂಖ್ಯೆಯನ್ನು ಹಿಂದಿಕ್ಕಲು 44 ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕು.
ಆದರೆ 2024 ರಲ್ಲಿ 15 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಲಿರುವ ಟೀಮ್ ಇಂಡಿಯಾ ಡ್ರಾ ಪಂದ್ಯಗಳ ಸಂಖ್ಯೆಯನ್ನು ಹಿಂದಿಕ್ಕಲು ಇನ್ನೂ ಮೂರು ವರ್ಷಗಳ ಕಾಲ ಕಾಯಬೇಕಾಗಿ ಬರಬಹುದು. ಏಕೆಂದರೆ ಕಳೆದ ಐದು ವರ್ಷಗಳಲ್ಲಿ ಟೀಮ್ ಇಂಡಿಯಾ ಆಡಿರುವುದು ಕೇವಲ 41 ಟೆಸ್ಟ್ ಪಂದ್ಯಗಳನ್ನು ಮಾತ್ರ. ಹೀಗಾಗಿ ಭಾರತ ತಂಡವು ಟೆಸ್ಟ್‌ನಲ್ಲಿ ಡ್ರಾ ಪಂದ್ಯಗಳಿಗಿಂತ ಗೆಲುವಿನ ಸಂಖ್ಯೆ ಹೆಚ್ಚಿಸಲು 2027ರವರೆಗೆ ಕಾಯಲೇಬೇಕು.