ಅಂಕೋಲಾ: ಜಿಲ್ಲೆಯಲ್ಲಿ ಸದ್ಯ ಮಳೆ ಆರ್ಭಟ ಕಡಿಮೆಯಾಗಿದೆ. ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಆದರೆ ವಾರಗಳಿಗೂ ಹೆಚ್ಚು ಕಾಲ ಅಬ್ಬರಿಸಿದ ಮಳೆ ಬಳಿಕ ಅಂಕೋಲಾದ ಕೆಲವೆಡೆ ಹಾವುಗಳ ಕಾಟ ಜೋರಾಗಿದೆ. ಮನೆ, ಜಮೀನು ಹೀಗೆ ಎಲ್ಲೆಂದರಲ್ಲಿ ಕಾಣಸಿಗುವ ಹಾವುಗಳಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಈ ಕುರಿತ ವಿಶೇಷ ವರದಿ ನಿಮಗಾಗಿ.
ಪ್ರವಾಹ ಭೀತಿ ದೂರಾದ ಬೆನ್ನಲ್ಲೇ ಹಾವುಗಳ ಕಾಟ.!
ಉತ್ತರ ಕನ್ನಡದಲ್ಲಿ ವಾರದ ಹಿಂದೆ ಬಿಟ್ಟು ಬಿಡದೆ ಅಬ್ಬರಿಸಿದ ಮಳೆ ಇದೀಗ ಕಡಿಮೆಯಾಗಿದೆ. ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು ಪ್ರವಾಹದ ಭೀತಿ ಕೂಡ ಕೊಂಚ ದೂರಾಗಿದೆ. ಆದರೆ ಮಳೆ ಕಡಿಮೆಯಾದ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕ ಶುರುವಾಗಿದೆ. ಇದು ಜನರನ್ನ ಇನ್ನಷ್ಟು ಕಂಗಾಲಾಗಿಸಿದೆ.
ಹೌದು.! ಅಂಕೋಲಾ ತಾಲೂಕಿನ ಕೆಲವೆಡೆ ಹಾವುಗಳ ಕಾಟ ಹೆಚ್ಚಾಗತೊಡಗಿದ್ದು ಈ ಭಾಗದ ಜನರಲ್ಲಿ ಆತಂಕ ಶುರುವಾಗಿದೆ. ತಾಲ್ಲೂಕಿನ ಕೇಣಿ, ಆವರ್ಸಾ, ಬೇಲಿಕೇರಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ನಿತ್ಯವೂ ಹಾವುಗಳು ಗೋಚರವಾಗತೊಡಗಿವೆ. ಮಾತ್ರವಲ್ಲದೆ ಮನೆ, ಕೋಳಿ ಗೂಡು, ಕೊಟ್ಟಿಗೆ, ಜಮೀನುಗಳಲ್ಲಿ ಹರಿದಾಡುತ್ತಿವೆ. ಹಾವುಗಳನ್ನು ನೋಡದೇ ತುಳಿದು ೫ ಕ್ಕೂ ಹೆಚ್ಚು ಮಂದಿ ಹಾವಿನ ಕಡಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ.
ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುತ್ತಿರೋ ಹಾವುಗಳು.!
ಭಾರೀ ಮಳೆಯಿಂದಾಗಿ ನದಿಗಳು ತುಂಬಿ ಹರಿದಿದ್ದು ಇದರ ಮೂಲಕ ಹರಿದುಬಂದ ಕಸಕಡ್ಡಿಗಳ ಜೊತೆಗೆ ಹಾವುಗಳು ತೇಲಿ ಬಂದಿವೆ. ಇದೀಗ ಹಾವುಗಳು ದಡ ಸೇರಿಕೊಳ್ಳುತ್ತಿದ್ದು ಮನೆ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಪ್ರತಿನಿತ್ಯ ಎಲ್ಲೆಂದರಲ್ಲಿ ಗೋಚರವಾಗುತ್ತಿರುವ ಹಾವುಗಳನ್ನು ಕಂಡು ಜನ ಕಂಗಾಲಾಗಿದ್ದಾರೆ. ರಾತ್ರಿ ವೇಳೆಗಳಲ್ಲಿ ಮನೆಯಿಂದ ಹೊರಬರುವುದಕ್ಕೂ ಜನ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ಯಾವಾಗ ಹಾವು ಕಚ್ಚುತ್ತದೆ ಎಂಬುದೇ ತಿಳಿಯದಂತಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಉರಗ ರಕ್ಷಕರು ಹೇಳೋದೇನು.?
ಇನ್ನು ಕರಾವಳಿ ಭಾಗದಲ್ಲಿ ಪ್ರತಿ ಮಳೆಗಾಲದಲ್ಲಿಯೂ ಇದೇ ಸ್ಥಿತಿ ಎದುರಾಗುತ್ತಿದೆ. ಅದರಲ್ಲೂ ಅಂಕೋಲಾ ಭಾಗದ ಕೆಲ ಗ್ರಾಮಗಳಲ್ಲಿ ಮಳೆಗಾಲದಲ್ಲಿ ನೆರೆ ಹಾವಳಿ ಜೊತೆಗೆ ಹಾವುಗಳ ಕಾಟದಿಂದಲೂ ಪಾರಾಗಲು ಜನ ಪರದಾಡಬೇಕಾಗಿದೆ. ಇನ್ನು ಈ ಬಗ್ಗೆ ಉರಗ ಪ್ರೇಮಿ ಮಹೇಶ್ ನಾಯ್ಕ ಅವರ ಬಳಿ ಕೇಳಿದ್ರೆ ಮಳೆಗಾಲದಲ್ಲಿ ನೀರಿನ ರಭಸಕ್ಕೆ ತೇಲಿ ಬರುವ ಹಾವುಗಳು ಎಲ್ಲಿ ಸಾಧ್ಯವೋ ಅಲ್ಲಿ ದಡ ಸೇರಿಕೊಂಡು ಮನೆ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಅಲ್ಲದೆ ಇತ್ತೀಚೇಗೆ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಯಿಂದಾಗಿ ಅವುಗಳ ಬಿಲಗಳು ನಾಶವಾಗಿವೆ. ಈ ಕಾರಣಗಳಿಂದ ಊರುಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವಾರಕ್ಕೆ ನಾಲ್ಕೆöÊದು ಹಾವುಗಳನ್ನು ಹಿಡಿಯಲಾಗುತ್ತಿದೆ. ಅದರಲ್ಲಿ ಹೆಚ್ಚು ಹೆಬ್ಬಾವು ಹಾಗೂ ನಾಗರ ಹಾವುಗಳಿದ್ದು ಕಾಳಿಂಗ ಸರ್ಪ ಸೇರಿದಂತೆ ಇತರೆ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದೇವೆ. ಜನರು ಎಷ್ಟೇ ಹಾವು ಬಂದರು ಅವುಗಳಿಗೆ ತೊಂದರೆ ಮಾಡದೆ ಅರಣ್ಯ ಇಲಾಖೆಗೆ ಇಲ್ಲವೇ ಹಾವು ಹಿಡಿಯುವವರಿಗೆ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ ಮಾನವನ ಸ್ವಯಂಕೃತ ಅಪರಾಧಗಳು, ಅಭಿವೃದ್ಧಿಯ ಪರಾಕಾಷ್ಟೆಗಳಿಂದಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕಾಡಿನಲ್ಲಿರಬೇಕಾದ ಸರಿಸೃಪಗಳು, ಪ್ರಾಣಿ, ಪಕ್ಷಿಗಳು ತಮ್ಮ ನೆಲೆಯನ್ನು ಕಳೆದುಕೊಂಡು ಊರುಗಳತ್ತ ಮುಖ ಮಾಡಿದ್ದು, ಇದೀಗ ಮನುಷ್ಯರಿಗೇ ಮಾರಕವಾಗಿರುವುದಂತು ಸತ್ಯವಾಗಿದೆ.