ಗೋಕರ್ಣ: ಒಂದೆಡೆ ಅದ್ದೂರಿ ಮೆರವಣಿಗೆಯಲ್ಲಿ ಸಾಗಿಬರುತ್ತಿರೋ ಜನ.! ಇನ್ನೊಂದೆಡೆ ಸಕ್ಕತ್ ಸ್ಟೆಪ್ ಹಾಕಿ ಎಂಜಾಯ್ ಮಾಡುತ್ತಿರೋ ಮಕ್ಕಳು.! ಊರಲ್ಲೆಲ್ಲ ಮದುವೆ ಸಡಗರ. ಹಾಗಂತ ಇದು ನಿಜವಾದ ಮದುವೆಯಲ್ಲ.! ಇದು ಹಾಲಕ್ಕಿ ಒಕ್ಕಲಿಗರ ಸಾಂಪ್ರದಾಯಿಕ ಆಚರಣೆ. ಹಾಗಾದರೆ ಏನಿದು ವಿಶಿಷ್ಠ ಸಂಪ್ರದಾಯ.?
ಅಪರೂಪದ ಈ ಕ್ಷಣ ಸೃಷ್ಟಿಯಾದದ್ದು ಎಲ್ಲಿ.? ಈ ಕುರಿತಾದ ಇಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.
ಹೌದು.! ಈ ರೀತಿಯ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದದ್ದು ಗೋಕರ್ಣದ ಹುಳಸೆಕೇರಿ ಗ್ರಾಮ. ಇದು ಹಾಲಕ್ಕಿ ಒಕ್ಕಲಿಗರ ವಿಶಿಷ್ಠ ಹಾಗೂ ಸಾಂಪ್ರದಾಯಿಕ ಆಚರಣೆ. ಸರಿಯಾಗಿ ಮಳೆಯಾಗಲೆಂದು ದಶಕಗಳಿಂದ ಕೇತಕಿ ವಿನಾಯಕ ಮತ್ತು ಕರಿ ದೇವರ ಸನ್ನಿಧಿಯಲ್ಲಿ ದಾದುಮ್ಮನ ಮದುವೆಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ ಗುರುವಾರ ಸಂಜೆ ಆಧುನಿಕತೆಯ ವಾದ್ಯ ಘೋಷ, ಡಿಜೆ ಹಾಡು, ಜಾನಪದ ನೃತ್ಯದೊಂದಿಗೆ ಈ ಸಾಂಪ್ರದಾಯಿಕ ಪದ್ಧತಿಯನ್ನು ಆಚರಿಸಿದ್ದಾರೆ.
ಆಶ್ಚರ್ಯದ ಸಂಗತಿ ಏನಪ್ಪಾ ಅಂದ್ರೆ, ಈ ಮದುವೆಯನ್ನ ಮಹಿಳೆಯರೇ ಸಂಪೂರ್ಣವಾಗಿ ನೆರವೇರಿಸುತ್ತಾರೆ. ಹೌದು.! ವರುಣ ದೇವನಾದ ದೇವೇಂದ್ರನನ್ನು ಮೆಚ್ಚಿಸಲು ಹಾಲಕ್ಕಿ ಸಮುದಾಯದವರು ಈ ವಿಭಿನ್ನ ಮದುವೆಯನ್ನ ಮಾಡುತ್ತಾರೆ. ಇದರಿಂದ ಮಳೆ ಸುರಿದು ಒಳ್ಳೆಯ ಫಸಲು ಕೈ ಸೇರಲಿ ಎನ್ನುವ ಉದ್ದೇಶದಿಂದ ಈ ಆಚರಣೆಯನ್ನು ನಡೆಸುತ್ತಾರೆ. ಅದಲ್ಲದೇ ಹಾಲಕ್ಕಿಗಳು ಹಳೆಯ ಸಾಂಪ್ರದಾಯ ಹಾಗೂ ಜಾನಪದೀಯ ಆಚರಣೆಯನ್ನು ಇಂದಿಗೂ ಮೂಲ ರೂಪದಲ್ಲಿ ನಡೆಸಿಕೊಂಡು ಬರುತ್ತಿರುವುದು ಸಾಂಪ್ರದಾಯಿಕ ಹಿರಿಮೆಗೆ ಸಾಕ್ಷಿಯಾಗಿದೆ.
ಈ ವಿಶಿಷ್ಠ ಸಂಪ್ರದಾಯದ ಮದುವೆಯಲ್ಲಿ ವರನ ಸ್ಥಾನದಲ್ಲಿ ಹೆಣ್ಣಿರುವುದು ವಿಶೇಷವಾಗಿದೆ. ಇಬ್ಬರು ಮುತ್ತೈದೆಯರು ಮಧು ಮತ್ತು ವರರಾಗಿರುತ್ತಾರೆ. ಪ್ರತಿ ವರ್ಷ ಬೇರೆ ಬೇರೆ ಸುಮಂಗಲಿಯರು ವಧು-ವರರಾಗುತ್ತಾರೆ.
ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮ ಆಷಾಢ ಬಹುಳ ಏಕಾದಶಿಯಂದು ನಡೆಯುತ್ತದೆ. ವಧು ವರರು ಯಾರೆಂಬ ತಿರ್ಮಾನವನ್ನು ಮಹಿಳೆಯರೇ ಪ್ರಕಟಿಸುತ್ತಾರೆ. ಹಾಲಕ್ಕಿ ಸಮುದಾಯದ ಪ್ರತೀ ಮನೆಯ ಮಹಿಳೆಯರು ಭಾಗವಹಿಸಿ ಎಲ್ಲಾ ಸಂಪ್ರದಾಯವನ್ನು ಮಾಡುತ್ತಾರೆ. ಆಷಾಢ ಅಮಾವಾಸ್ಯೆಯ ಸಂಧ್ಯಾ ಕಾಲದಲ್ಲಿ ಈ ‘ಛಾಯ ವಿವಾಹ’ವನ್ನು ಕೇತಕಿ ವಿನಾಯಕ ಮಂದಿರ ಮತ್ತು ಕರಿದೇವರ ಸಾನಿಧ್ಯದಲ್ಲಿ ಮಾಡಲಾಗುತ್ತದೆ.
ಅಲ್ಲಿ ಹರಿಯುತ್ತಿರುವ ಸ್ವಚ್ಚಂದ ನೀರು, ಸುಂದರ ಪರಿಸರದಲ್ಲಿ ಆಚೆ ಈಚೆ ವಧು ಮತ್ತು ವರರ ಕಡೆಯವರು ನಿಂತು ಹೆಣ್ಣು ಕೇಳುವ ಶಾಸ್ತ್ರ ಪೂರೈಸುತ್ತಾರೆ. ಈ ಸಂದರ್ಭದಲ್ಲಿ ಎರಡೂ ಕಡೆಯವರು ಜಾನಪದ ಹಾಡಿನ ಮೂಲಕ ತಮ್ಮ ತಮ್ಮ ಹೆಚ್ಚುಗಾರಿಕೆಯ ಪ್ರದರ್ಶನ ಮಾಡುತ್ತಾರೆ. ಹೆಣ್ಣು ಗಂಡು, ಒಪ್ಪಿಗೆ ಆದ ಮೇಲೆ ದೇವರ ಎದುರು ಇಬ್ಬರಿಗೂ ಮಾಲೆ ಹಾಕಿಸಿ ಮದುವೆ ಮಾಡಲಾಗುತ್ತದೆ. ಹಾಲಕ್ಕಿ ಒಕ್ಕಲಿಗರ ಜಾನಪದ ಹಾಡುಗಳೇ ವಿವಾಹದ ಮಂತ್ರ, ತಂತ್ರಗಳ ಸ್ಥಾನವನ್ನು ತುಂಬುತ್ತವೆ.
ಹಿರಿಯ ಮುತ್ತೈದೆಯರು ಹಾಡುಗಳನ್ನ ಹಾಡುತ್ತಾ ವಿವಾಹದಲ್ಲಿ ಆಚರಿಸುವ ಎಲ್ಲಾ ಪದ್ದತಿಗಳನ್ನೂ ನಡೆಸಿಕೊಡುವುದು ಮುಖ್ಯ ಸಂಗತಿಯಾಗಿದೆ. ಮದುವೆ ನಂತರ ಮಧುಮಕ್ಕಳನ್ನು ಹುಳಸೆಕೇರಿಯ ಗೌಡರ ಮನೆಗೆ ಮೆರವಣಿಗೆಯಲ್ಲಿ ಕರೆತಂದು, ಮುಖ್ಯ ಗೌಡರ ನೇತೃತ್ವದಲ್ಲಿ ಧಾರೆ ಶಾಸ್ತ್ರ ನಡೆಸಿ ವಧುವರರಿಗೆ ಉಡುಗೊರೆ ನೀಡಲಾಗುತ್ತದೆ. ಬಳಿಕ ಸಿಹಿ, ತಂಪುಪಾನೀಯ ಊಟ ಉಪಚಾರಗಳೊಂದಿಗೆ ದಾದುಮ್ಮನ ಮದುವೆ ಮುಕ್ತಾಯವಾಗುತ್ತದೆ.