ಕಾರವಾರ: ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಠ್ಯೇತರ ಹಾಗೂ ಕ್ರೀಡೆ ಚಟುವಟಿಕೆಗಳಲ್ಲಿ ಸಕ್ರಿಯವಾಗುದು ಬಿಟ್ಟರೆ ಹೀಗೆ ಕೃಷಿಯ ಕಡೆ ಗಮನ ಕೊಡುವುದು ತೀರಾ ಅಪರೂಪ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿಕರ ಕಷ್ಟ ಗೊತ್ತಾಗಬೇಕು, ನೇಜಿ ನಾಟಿ ಮಾಡುವುದು ಹೇಗೆ.? ಉಳುಮೆ ಮಾಡುವುದು ಹೇಗೆ.? ಎಂದು ಪ್ರಾಯೋಗಿಕವಾಗಿ ತಿಳಿಯಬೇಕೆಂದು ಕಾರವಾರದ ಕಡಲ ಸಿರಿ ಯುವ ಸಂಘದವರು ಭಾನುವಾರ ತಾಲೂಕಿನ ನಗೆ ಗ್ರಾಮದಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಗದ್ದೆಯಲ್ಲಿ ನಾಟಿ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿ ಗಮನ ಸೆಳೆದರು.
ನಗೆ ಗ್ರಾಮದ ರೈತ ಕೋಮಾರ ಗೌಡರ ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ನೇಜಿ ನಾಟಿಯ ಬಗ್ಗೆ ಮತ್ತು ಕೃಷಿಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ತಿಳಿಸಲಾಯಿತು. ಕಡಲಸಿರಿ ಯುವ ಸಂಘದ ಪದಾಧಿಕಾರಿಗಳು ಸ್ವತಃ ನೇಗಿಲು ಹಿಡಿದು ಉಳುಮೆ ಮಾಡಿಕೊಂಡು ವಿದ್ಯಾರ್ಥಿಗಳ ಜೊತೆ ನೇಜಿ ನಾಟಿ ಮಾಡಿದ್ದು ವಿಶೇಷವಾಗಿತ್ತು. ಸದಾ ಪಾಠ ಆಟದಲ್ಲಿ ಬ್ಯುಸಿ ಇದ್ದ ವಿದ್ಯಾರ್ಥಿಗಳು ಕೃಷಿ ಗದ್ದೆಯಲ್ಲಿ ಹೋಗಿ ನಾಟಿ ಕಾರ್ಯದ ಸಂದರ್ಭವನ್ನು ಕಣ್ತುಂಬಿಕೊಂಡು ಆನಂದ ಪಡೆದರು.
ಇದೇ ವೇಳೆ ನಗೆ ಗ್ರಾಮದ ರೈತ ಕೋಮಾರ ಗೌಡರಿಗೆ ಕಡಲ ಸಿರಿ ಯುವ ಸಂಘದವರು ಸನ್ಮಾನ ಮಾಡಿ ಗೌರವಿಸಿದರು. ತಾವು ಕೃಷಿಯಲ್ಲಿ ಬೆಳೆದುಬಂದ ದಾರಿಯ ಕುರಿತು ಹಾಗೂ ಯಾವ ತರಹ ಕೃಷಿಯಲ್ಲಿ ಭತ್ತ ಬೆಳೆಯುತ್ತಾರೆ ಎಂದು ಕೋಮಾರ ಗೌಡರು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಡಲ ಸಿರಿ ಯುವ ಸಂಘದ ಉಪಾಧ್ಯಕ್ಷ ಅಭಿಷೇಕ ಗೋವಿಂದಾಯ ಕಳಸ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಬಾಬುರಾಯ ಶೇಟ್, ಮತ್ತು ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಭಾರತ ದೇಶ ಕೃಷಿ ಪ್ರಧಾನ ದೇಶವಾದರಿಂದ ನಮ್ಮ ಕಡಲ ಯುವ ಸಂಘದಿAದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಉತ್ತೇಜನ ಬರುವಂತೆ ‘ವಿದ್ಯಾರ್ಥಿಗಳ ನಡೆ ಕೃಷಿಯ ಕಡೆ’ ಎಂಬ ಹೊಸದಾಗಿ ಕಾರ್ಯಕ್ರಮ ಮಾಡಿದ್ದೇವೆ, ಮುಂದೆಯೂ ಕೂಡಾ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೀಗೆ ಹಲವಾರು ಸಾಮಾಜಿಕ ಕಳಕಳಿ ಸಂದೇಶ ನೀಡುವಂತಹ ಕಾರ್ಯಕ್ರಮಗಳನ್ನು ಮಾಡಲಾಗುವುದು.
ಪ್ರಜ್ವಲ್ ಬಾಬುರಾಯ ಶೇಟ್
ಪ್ರಧಾನ ಕಾರ್ಯದರ್ಶಿ, ಕಡಲ ಸಿರಿ ಯುವ ಸಂಘ