ದಾಂಡೇಲಿ: ಸರಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಆಯುಷ್ ಆಸ್ಪತ್ರೆಯೊಂದು ತಾಲೂಕಿನಲ್ಲಿ ನಿರ್ಮಾಣಗೊಂಡಿದೆ. ಈ ಆಸ್ಪತ್ರೆ ಉದ್ಘಾಟನೆಗೊಂಡು 6 ತಿಂಗಳುಗಳೇ ಕಳೆದಿದೆ. ಆದರೆ ಇದುವರೆಗೂ ಇಲ್ಲಿ ಒಬ್ಬನೇ ಒಬ್ಬ ಖಾಯಂ ವೈದ್ಯರ ನೇಮಕವಾಗಿಲ್ಲ, ಖಾಯಂ ಸಿಬ್ಬಂದಿಯೂ ಇಲ್ಲ. ಕೊನೆಪಕ್ಷ ಬಂದ ರೋಗಿಗಳಿಗೆ ಚಿಕಿತ್ಸೆಗೆ ಹಾಸಿಗೆಯೂ ಇಲ್ಲ. ಈ ಬಗ್ಗೆ ಯಾರನ್ನಾದರೂ ಕೇಳೋಣವೆಂದರೆ ಆಸ್ಪತ್ರೆಯಲ್ಲಿ ಒಂದೇ ಒಂದು ನರಪಿಳ್ಳೆಯೂ ಇಲ್ಲ. ಹಾಗಾದ್ರೆ ಈ ಆಸ್ಪತ್ರೆ ಇಷ್ಟೊಂದು ನಿರ್ಲಕ್ಷಕ್ಕೊಳಗಾಗಿದ್ದು ಯಾಕೆ.? ‘ಇಲ್ಲ’ಗಳ ಕೂಪವಾಗಿರುವ ಆಸ್ಪತ್ರೆಯ ಅವ್ಯವಸ್ಥೆಯ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ.
ಶಾಸಕ ಆರ್. ವಿ. ದೇಶಪಾಂಡೆಯವರ ಪ್ರಯತ್ನದಿಂದ ತಾಲೂಕಿನಲ್ಲಿ ಆಯುಷ್ ಆಸ್ಪತ್ರೆ ನಿರ್ಮಾಣವಾಗಿದೆ. ಈಗಾಗಲೇ ದಾಂಡೇಲಿಯಲ್ಲಿ ವಿಶಾಲವಾದ ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆಯಿದೆ. ಅದರ ಎದುರಿಗೆ ತಾಯಿ-ಮಕ್ಕಳ ಆಸ್ಪತ್ರೆಯಿದೆ. ಗಾಂಧಿನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಮಿಕರು ಹಾಗೂ ಅವರ ಕುಟುಂಬದವರಿಗಾಗಿ ಇಎಸ್ ಐ ಆಸ್ಪತ್ರೆ, ಕಾಗದ ಕಂಪನಿಯ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗಾಗಿ ಖಾಸಗಿ ಆಸ್ಪತ್ರೆ ಸೇರಿದಂತೆ ಹಲವಾರು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ತಾಲೂಕಿನಲ್ಲಿವೆ. ಈ ಎಲ್ಲಾ ಆಸ್ಪತ್ರೆಗಳ ಜೊತೆ ಹೊಸತಾಗಿ ಆಯುಷ್ ಆಸ್ಪತ್ರೆಯೂ ಸೇರಿಕೊಂಡಿದೆ.
ಕೋಟ್ಯಂತರ ರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ: ವೈದ್ಯರಿಲ್ಲ, ಸಿಬ್ಬಂದಿಗಳಿಲ್ಲ.!
ಹೌದು.! ನಗರದ ಅಂಬೇವಾಡಿಯಲ್ಲಿ ಸರ್ಕಾರಿ ಪದವಿ ಕಾಲೇಜಿನ ಎದುರು ಈ ಆಯುಷ್ ಆಸ್ಪತ್ರೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಕಳೆದ ಫೆಬ್ರುವರಿ 22 ರಂದು ಶಾಸಕ ಆರ್. ವಿ. ದೇಶಪಾಂಡೆ ಇದರ ಉದ್ಘಾಟನೆಯನ್ನು ನೆರವೇರಿಸಿದರು. ಇದೀಗ ಈ ಆಸ್ಪತ್ರೆಗೆ ಆರಂಭಗೊಂಡು ಸುಮಾರು 6 ತಿಂಗಳೇ ಕಳೆದಿದೆ. ಡಿಡಿಓ ಕೋಡ್ ಕೂಡಾ ಬಂದಿದೆ. ಆದರೆ ಈ ಆಸ್ಪತ್ರೆಗೆ ಇದುವರೆಗೂ ಕೂಡ ಒಬ್ಬನೇ ಒಬ್ಬ ಖಾಯಂ ವೈದ್ಯರ ನೇಮಕವಾಗಿಲ್ಲ. ಅಷ್ಟೇ ಅಲ್ಲ ಕನಿಷ್ಟಪಕ್ಷ ಒಬ್ಬ ಖಾಯಂ ಸಿಬ್ಬಂದಿಯ ನೇಮಕ ಕೂಡಾ ಆಗಿಲ್ಲ. ಸದ್ಯ ಗುತ್ತಿಗೆ ಆಧಾರದಲ್ಲಿ ಒಬ್ಬ ಆಯುರ್ವೇದಿಕ್ ವೈದ್ಯರನ್ನು ನೇಮಕ ಮಾಡಲಾಗಿದ್ದು, ಅವರು ಅಂಕೋಲಾದಿಂದ ನಿತ್ಯ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊರತಾಗಿ ಜೊಯಿಡಾದಿಂದ ಒಬ್ಬ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹೀಗಾಗಿ ಇಡೀ ಆಸ್ಪತ್ರೆಯನ್ನು ಕೇವಲ ಒಬ್ಬ ಮಹಿಳಾ ಸಿಬ್ಬಂದಿ ನೋಡಿಕೊಳ್ಳುವಂತಾಗಿದೆ.
ಹಲವು ಸೌಕರ್ಯಗಳಿದ್ದರೂ ಉಪಯೋಗವಿಲ್ಲ.!
ಇದಿಷ್ಟೇ ಅಲ್ಲ ವಿಶಾಲವಾದ ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು ಆಸ್ಪತ್ರೆಯ ಸ್ವಾಗತ ಕೊಠಡಿ, ಲ್ಯಾಬೊರೆಟರಿ, ವೈದ್ಯರ ಕೊಠಡಿ, ಔಷಧಿ ಕೊಠಡಿ, ಒಳ ರೋಗಿಗಳ ಕೊಠಡಿ, ಸೇರಿದಂತೆ ಹಲವು ವಿಭಾಗಗಳಲ್ಲಿ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ಆದರೆ ಭಾಗಶಃ ಎಲ್ಲ ಕೊಠಡಿಗಳು ಕೂಡಾ ಖಾಲಿಯಿದ್ದು ಬಾಗಿಲು ಮುಚ್ಚಿಕೊಂಡಿವೆ. ಆಸ್ಪತ್ರೆಗೆ ಕನಿಷ್ಠ ಹತ್ತು ಬೆಡ್ ಗಳ ಅವಶ್ಯಕತೆಯಿದ್ದು ಇಲ್ಲಿಯವರೆಗೂ ಒಂದೇ ಒಂದು ಬೆಡ್ ಗಳನ್ನು ಕೂಡ ತಂದಿಲ್ಲ. ಔಷಧಿ ಕೊಠಡಿಯಲ್ಲಿ ಔಷಧಿಗಳಿದ್ದರೂ ಅದನ್ನ ಕೊಡುವವರಿಲ್ಲ. ಚಿಕಿತ್ಸೆಗೆಂದು ಬಂದ ರೋಗಿಗಳು ವೈದ್ಯರಿಲ್ಲದೇ ಸಮರ್ಪಕ ಸೌಕರ್ಯಗಳಿಲ್ಲದೆ ಮರಳಿ ಹೋಗುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆಸ್ಪತ್ರೆಗೆ ಬಂದು ಹೋಗುವ ರೋಗಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಆಯುಷ್ ಆಸ್ಪತ್ರೆಯಲ್ಲಿ ಒಬ್ಬರು ಆಯುರ್ವೇದಿಕ್ ವೈದ್ಯರು, ಒಬ್ಬರು ಹೋಮಿಯೋಪತಿ ವೈದ್ಯರು, ಒಬ್ಬ ಕ್ಲರ್ಕ್, 2 ಸ್ಟಾಪ್ ನರ್ಸ್, 3 ಗ್ರೂಪ್ ಡಿ ದರ್ಜೆ ನೌಕರರು ಇರಬೇಕು. ಈ ಪೈಕಿ ಒಬ್ಬರು ಮಾತ್ರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಧಿಕಾರಿಗಳು ಏನಂತಾರೆ.?
‘ದಾಂಡೇಲಿಯ ಆಯುಷ್ ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿಗಳ ಬಗ್ಗೆ ಹಾಗೂ ಮೂಲ ಸೌಕರ್ಯಗಳ ಬಗ್ಗೆ ನಾವು ಈಗಾಗಲೇ ಇಲಾಖೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅವಶ್ಯವಿರುವ ಕೆಲವು ವೈದ್ಯರ ಮಂಜೂರಾತಿ ಆಗಿದೆ. ಆದರೆ ಪೋಸ್ಟಿಂಗ್ ಆಗಿಲ್ಲ. ಕೆಲವೇ ದಿನಗಳಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಪೋಸ್ಟಿಂಗ್ ಆಗುವ ಸಾಧ್ಯತೆಯಿದೆ. ಇಬ್ಬರು ಕ್ಷಯರೋಗ ತಜ್ಞರು ಸೇರಿದಂತೆ ಹಲವು ಸಿಬ್ಬಂದಿಗಳ ನೇಮಕವಾಗಲಿದೆ. ಹತ್ತು ಹಾಸಿಗೆಗಳು ಕೂಡ ಬರಲಿದೆ’
– ಡಾ. ಲಲಿತಾ ಶೆಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ
ಶಾಸಕರು ಏನಂತಾರೆ.?
‘ದಾಂಡೇಲಿಗೊಂದು ಆಯುಷ್ ಆಸ್ಪತ್ರೆಯ ಅವಶ್ಯಕತೆಯನ್ನು ಮನಗೊಂಡು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ, ಮಂಜೂರಿ ಪಡೆದು ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಈ ಆಸ್ಪತ್ರೆಗೆ ಅವಶ್ಯವಿರುವ ವೈದ್ಯರು, ಸಿಬ್ಬಂದಿಗಳು ಹಾಗೂ ಮೂಲ ಸೌಕರ್ಯಗಳನ್ನು ನೀಡುವಂತೆ ಈಗಾಗಲೇ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಆದರೆ ಕೆಲಸಗಳೇ ಆಗುತ್ತಿಲ್ಲ. ಆದಷ್ಟು ಬೇಗ ಸಮಸ್ಯೆ ನಿವಾರಿಸಲು ನನ್ನಿಂದಾದ ಪ್ರಯತ್ನ ಮಾಡುತ್ತೇನೆ’
-ಆರ್. ವಿ. ದೇಶಪಾಂಡೆ, ಶಾಸಕರು
ವೈದ್ಯರು ಹಾಗೂ ಸಿಬ್ಬಂದಿಗಳು ಬಂದು ಆಸ್ಪತ್ರೆ ಸುವ್ಯವಸ್ಥೆಯಿಂದ ನಡೆಯಲು ಇನ್ನೆಷ್ಟು ದಿನವೋ ಅನ್ನೂ ಪ್ರಶ್ನೆ ಎದುರಾಗಿದೆ. ಒಟ್ಟಿನಲ್ಲಿ ಆಸ್ಪತ್ರೆ ಇದ್ದರೂ ವೈದ್ಯರಿಲ್ಲದೇ ರೋಗಿಗಳು ಪರದಾಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಸಿಬ್ಬಂದಿಗಳ ನೇಮಕ ಮಾಡಬೇಕಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಈ ರೀತಿ ಅವ್ಯವಸ್ಥೆ ಎದುರಾದರೆ ಸಾರ್ವಜನಿಕರ ತೆರಿಗೆ ದುಡ್ಡು ವ್ಯರ್ಥವಾದಂತೆ ಅಲ್ಲವೇ.?