ಕುಮಟಾ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ವರುಣನ ಆರ್ಭಟಕ್ಕೆ ಕುಮಟಾ ತಾಲೂಕಿನ ಸಿದ್ದನಬಾವಿಯಲ್ಲಿರುವ ಸರ್ಕಾರಿ ಪ್ರಾಯೋಗಿಕ ಶಾಲೆ ಸೋರುತ್ತಿದ್ದು ವಿದ್ಯಾರ್ಥಿಗಳು ತರಗತಿಯಲ್ಲಿ ನೀರಿನಲ್ಲೇ ಕುಳಿತು ಪಾಠ-ಪ್ರವಚನ ಕೇಳುವ ದುಸ್ಥಿತಿ ಬಂದೊದಗಿದೆ.
ಬೀಳುವ ಹಂತದಲ್ಲಿದೆ ಸರ್ಕಾರಿ ಶಾಲೆ.!
ಹೌದು.! ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ (ಡಯಟ್) ಅಧಿನದಲ್ಲಿರುವ ಸರ್ಕಾರಿ ಪ್ರಾಯೋಗಿಕ ಶಾಲೆಯು 1947 ರಲ್ಲಿ ಸ್ಥಾಪನೆಗೊಂಡಿತು. ಇದೀಗ ಕಟ್ಟಡ 75 ವರ್ಷಗಳನ್ನ ಪೂರೈಸಿದ್ದು ಸಂಪೂರ್ಣ ಶಿಥಿಲಾವಸ್ಥೆ ಹಂತ ತಲುಪಿದೆ. ಒಂದೆಡೆ ಕೊಠಡಿಯ ಮೇಲ್ಛಾವಣಿ ಇಂದೋ ಅಥವಾ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿದ್ರೆ ಇನ್ನೊಂದೆಡೆ ಸೋರುವ ಕಟ್ಟಡದಲ್ಲೇ ವಿದ್ಯಾರ್ಥಿಗಳು ಭಯದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ.!
ಡಯಟ್ ಕಾಲೇಜಿನಲ್ಲಿ ತರಬೇತಿ ಪಡೆದ ಶಿಕ್ಷಕರು ಕಲಿಕಾ ತರಬೇತಿ ಪಡೆಯಲು ಈ ಪ್ರಾಯೋಗಿಕ ಶಾಲೆ ಆರಂಭಿಸಲಾಗಿತ್ತು. ಸದ್ಯ ಶಾಲೆಯಲ್ಲಿ 27 ಗಂಡು ಮತ್ತು 23 ಹೆಣ್ಣುಮಕ್ಕಳು ಸೇರಿ ಒಟ್ಟೂ 50 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಮಳೆ ಬಂದರೆ ಕೊಠಡಿಯ ಒಳಗಡೆ ನೀರು ಸಂಗ್ರಹವಾಗುತ್ತದೆ. ಶಿಕ್ಷಕರೇನೋ ಮಳೆ ನೀರನ್ನು ಹೊರಗಡೆ ಚೆಲ್ಲುತ್ತಿದ್ದು, ಆದರೆ ಮತ್ತೆ ಯಥಾಸ್ಥಿತಿ. ಇನ್ನು ಒಂದೆರಡು ಕೋಣೆಗಳು ಮತ್ತು ಕಾರಿಡಾರ್ ಚಾವಣಿಯ ಸಿಮೆಂಟ್ ಪ್ಲಾಸ್ಟರ್ ಕೂಡಾ ಯಾವಾಗ ಉದುರಿ ಬೀಳತ್ತೋ ಅನ್ನೋ ಭಯ ಕಾಡುತ್ತಿದೆ. ಮಕ್ಕಳಿಗೆ ಬೇರೆ ಕಡೆ ವ್ಯವಸ್ಥೆ ಕಲ್ಪಿಸಬೇಕು ಅಥವಾ ಶಾಲಾ ಕಟ್ಟಡವನ್ನು ಆದಷ್ಟು ಬೇಗ ದುರಸ್ಥಿಗೊಳಿಸಬೇಕು ಎನ್ನುವುದು ಪಾಲಕರ ಆಗ್ರಹವಾಗಿದೆ.
ಸಮಸ್ಯೆ ನುಂಗಿಕೊಂಡು ಪಾಠ ಮಾಡುವ ಅನಿವಾರ್ಯತೆಯಲ್ಲಿ ಶಿಕ್ಷಕರು.!
ಮಳೆ ನೀರು ಕೊಠಡಿಯಲ್ಲಿ ತುಂಬುವ ಹಿನ್ನೆಲೆಯಲ್ಲಿ ತರಗತಿಯನ್ನ ತಾತ್ಕಾಲಿಕವಾಗಿ ಬೇರೆ ಕೊಠಡಿಗೆ ಸ್ಥಳಾಂತರಿಸಿದ್ದು ಅಲ್ಲಿಯೂ ಅದೇ ಪರಿಸ್ಥಿತಿ. ಒಟ್ಟಾರೆ ವಿದ್ಯಾರ್ಥಿಗಳ ಗೋಳು ಮಾತ್ರ ಇಲ್ಲಿ ಯಾರೂ ಕೇಳೋರಿಲ್ಲ. 5 ಮತ್ತು 6 ನೆಯ ತರಗತಿಯನ್ನು ಒಂದೇ ಕಡೆ ನಡೆಸಲಾಗುತ್ತಿದೆ. ಈ ವಿಷಯವನ್ನು ಎಲ್ಲಿಯಾದರೂ ಹೇಳಿದರೆ ನಮ್ಮ ವೃತ್ತಿಗೆ ತೊಂದರೆಯಾಗಬಹುದೇನೋ ಎಂದು, ಸಮಸ್ಯೆಯನ್ನು ನುಂಗಿಕೊಂಡೇ ಪಾಠ ಮಾಡುವ ಅನಿವಾರ್ಯತೆಯಲ್ಲಿ ಶಿಕ್ಷಕರಿದ್ದಾರೆ.
ಅಂಗನವಾಡಿ ಕೇಂದ್ರದ ಒಳಗೂ ನೀರು.!
ಪ್ರಾಯೋಗಿಕ ಶಾಲೆಯ ಒಂದು ಕೊಠಡಿಯಲ್ಲಿ ಅಂಗನವಾಡಿ ಕೇಂದ್ರವೂ ನಡೆಯುತ್ತಿದೆ. ಅಲ್ಲಿಯೂ ಪುಟ್ಟ ಮಕ್ಕಳು ಮಳೆ ನೀರಿನಲ್ಲಿಯೇ ಕುಳಿತು ಅಭ್ಯಾಸ ಮಾಡುತ್ತಿದ್ದಾರೆ. ಚಳಿಯಿಂದ ಚಿಕ್ಕಮಕ್ಕಳಿಗೆ ಶೀತ, ಜ್ವರ ಬರುತ್ತಿದೆ. ಮಳೆ ಬಂತೆಂದರೆ ಛತ್ರಿ ಹಿಡಿದು ಪಾಠ ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಈ ಅವ್ಯವಸ್ಥೆ ಕುರಿತು ಇಲಾಖೆ ಅಧಿಕಾರಿಗಳು ಏನಂತಾರೆ.?
ಮೇಲ್ಛಾವಣಿಯ ತುರ್ತು ದುರಸ್ಥಿ ಕೈಗೊಳ್ಳುವ ಬಗ್ಗೆ ಜಿ.ಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶಾಸಕರ ಗಮನಕ್ಕೂ ತರಲಾಗಿದೆ. ಅವರು ಸಹ ಶೀಘ್ರ ಹಣ ಬಿಗಡೆಯಾಗುವಂತೆ ಸೂಚಿಸಿದ್ದಾರೆ. ಹಣ ಬಿಡುಗಡೆಯಾದರೆ ಒಂದು ವಾರದ ಒಳಗಡೆ ದುರಸ್ಥಿ ಕಾರ್ಯ ಕೈಗೊಳ್ಳಲಾಗುತ್ತದೆ. ವಿಪರೀತ ಮಳೆಯಾದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಿತದೃಷ್ಟಿಯಿಂದ ತರಗತಿ ಸ್ಥಳಾಂತರದ ಬಗ್ಗೆ ಉಪನಿರ್ದೇಶಕ ಜತೆ ಚರ್ಚಿಸಿ, ಅದಕ್ಕೂ ಕ್ರಮ ವಹಿಸಲಾಗುತ್ತದೆ.
-ರಾಜೇಂದ್ರ ಭಟ್ಟ, ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಾಯೋಗಿಕ ಶಾಲೆಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿದ್ದೇನೆ. ದುರಸ್ಥಿಗೆ ಹಣ ಬಿಡುಗಡೆಗೆ ಜಿಲ್ಲಾ ಪಂಚಾಯತ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿ.ಪಂ ಸಿ.ಇ.ಓ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಶೀಘ್ರದಲ್ಲಿ ಸರಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತದೆ.
-ನಾರಾಯಣ ನಾಯಕ, ಕುಮಟಾ ಡಯಟ್ ಪ್ರಾಚಾರ್ಯ
ಇದು ಸರ್ಕಾರಿ ಶಾಲೆಯ ಪರಿಸ್ಥಿತಿ. ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರೋ ಸರ್ಕಾರಕ್ಕೆ ಈ ಶಾಲೆ ಕಣ್ಣಿಗೆ ಬೀಳದಿರುವುದು ನಿಜಕ್ಕೂ ದುರಾದೃಷ್ಟಕರ. ಇನ್ನಾದ್ರೂ ಶಿಕ್ಷಣ ಇಲಾಖೆ ಇತ್ತ ಗಮನಹರಿಸಿ ಜೀರ್ಣಾವಸ್ಥೆ ತಲುಪಿರುವ ಶಾಲೆಯನ್ನ ದುರಸ್ಥಿಗೊಳಿಸಬೇಕಿದೆ. ಆ ಮೂಲಕ ಮಕ್ಕಳಿಗೂ ಶಾಲೆಯಲ್ಲಿ ನಿಶ್ಚಿಂತೆಯಿಂದ ಪಾಠ ಕೇಳುವ ವಾತಾವರಣ ನಿರ್ಮಿಸಿಕೊಡಬೇಕಿದೆ.