ನಿಧಿ ಆಸೆಗಾಗಿ ಪುರಾತನ ದೇವಾಲಯವನ್ನೇ ಅಗೆದ್ರಾ ದುರುಳರು.?!

ಶಿರಸಿ: ನಿಧಿ ಆಸೆಗಾಗಿ ದುಷ್ಕರ್ಮಿಗಳು ಪುರಾತನ ದೇವಾಲಯವನ್ನೇ ಅಗೆದ ಘಟನೆ ತಾಲೂಕಿನ ನೇರ್ಲವಳ್ಳಿ ಗ್ರಾಮದ ದೇವಿಕೈ ಕಲ್ಲೇಶ್ವರ ದೇವಾಲಯದಲ್ಲಿ ನಡೆದಿದೆ.

ಅಗೆದ ಜಾಗವನ್ನು ಸೊಪ್ಪಿನಿಂದ ಮುಚ್ಚಿದರು.!

ಕಳೆದ ಕೆಲ ದಿನಗಳ ಹಿಂದೆ ದೇವಾಲಯದ ಸಮೀಪ ದುಷ್ಕರ್ಮಿಗಳು ಐದು ಅಡಿ ಆಳದ ಗುಂಡಿತೋಡಿದ್ದು ಜೊತೆಗೆ ಅಲ್ಲಲ್ಲಿ ಅಗೆದು ಹಾಕಿದ್ದಾರೆ. ದೇವಾಲಯದ ಆವರಣ ಮತ್ತು ಸುತ್ತಲೂ ಅಗೆದ ಜಾಗದಲ್ಲೆಲ್ಲಾ ನಿಂಬೆಹಣ್ಣನ್ನು ಇಟ್ಟಿದ್ದಾರೆ. ಇನ್ನೂ ಕೆಲವೆಡೆ ಕುಂಕುಮ ಚೆಲ್ಲಿದ್ದಾರೆ. ತಮ್ಮ ಈ ಕೃತ್ಯ ತಿಳಿಯಬಾರದೆಂದು ಅಗೆದ ಗುಂಡಿಗಳಿಗೆ ತರಗೆಲೆ ಮತ್ತು ಸೊಪ್ಪನ್ನು ಹಾಕಿ ಮುಚ್ಚಿದ್ದಾರೆ. ದೇವಾಲಯದ ಪಕ್ಕದಲ್ಲಿ ಇರುವ ಹುತ್ತದ ಬಳಿ ಹಳ್ಳ ತೋಡಿದ್ದು ನಾಲ್ಕಾರು ಜನ ಸೇರಿ ನಿಧಿ ಆಸೆಗಾಗಿ ಈ ಕೃತ್ಯ ನಡೆಸಿರಬಹುದೆಂದು ಹೇಳಲಾಗುತ್ತಿದೆ.

ದೇವಾಲಯದ ಜೀರ್ಣೋದ್ಧಾರದ ಯೋಚನೆಯಲ್ಲಿದ್ದ ಗ್ರಾಮಸ್ಥರು.!

ದಟ್ಟ ಕಾಡಿನ ಮಧ್ಯೆ ಇರುವ ಈ ದೇವಾಲಯವು ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದೆ. ಪಾಳುಬಿದ್ದಿದ್ದ ಈ ದೇವಾಲಯವನ್ನು ಇತ್ತೀಚೆಗೆ ಸ್ಥಳೀಯರೆಲ್ಲ ಸೇರಿ ಹಣ ಸಂಗ್ರಹಿಸಿ ಛಾವಣಿ ಮತ್ತು ನೆಲಹಾಸು ನಿರ್ಮಿಸಿದ್ದರು. ದಾನಿಗಳ ಸಹಕಾರದಿಂದ ದೇವಾಲಯವನ್ನು ಅಭಿವೃದ್ಧಿ ಮಾಡಬೇಕೆಂಬ ಯೋಚನೆಯಲ್ಲಿ ಗ್ರಾಮದವರಿದ್ದರು. ಇಂತಹ ಸಂದರ್ಭದಲ್ಲಿಯೇ ಈ ರೀತಿ ಕೃತ್ಯ ನಡೆದಿರುವುದು ಭಕ್ತರಿಗೆ ನೋವುಂಟುಮಾಡಿದೆ.

ಇಂತಹ ಕೃತ್ಯ ನಡೆಸಿದವರನ್ನು ಪತ್ತೆಹಚ್ಚಿ.!

‘ಈ ದುಷ್ಕೃತ್ಯ ನಡೆಸಿದವರನ್ನು ಪತ್ತೆಹಚ್ಚಿ ಮುಂದೆಂದೂ ಇಂತಹ ಘಟನೆ ನಡೆಯದಂತೆ ತಡೆಯಬೇಕು’

ಪ್ರಶಾಂತ ಅಲಗೇರಿಕರ್, ಗ್ರಾಮಸ್ಥರು

‘ದೇವಾಲಯವು ಕಾಡಿನ ಮಧ್ಯ ಇರುವುದರಿಂದ ಜನವಸತಿ ಇಲ್ಲ. ಹೀಗಾಗಿ ದುರುಳರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ದೇವಾಲಯಕ್ಕೆ ಸೂಕ್ತ ಭದ್ರತಾ ಗೋಡೆ ನಿರ್ಮಿಸಿಕೊಡಬೇಕು’

ಶ್ರೀಧರ ಹೆಗಡೆ ಸಾಯೀಮನೆ, ದೇವಾಲಯದ ಅಧ್ಯಕ್ಷರು

ಪ್ರಾಚೀನ ದೇವಾಲಯಗಳನ್ನ ಉಳಿಸಿಕೊಳ್ಳೋಣ.!

ಒಟ್ಟಾರೆ ಪ್ರಾಚೀನ ಇತಿಹಾಸ ಹೊಂದಿರುವ ಇಂತಹ ದೇವಸ್ಥಾನಗಳನ್ನ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ನಿಧಿಗೋಸ್ಕರವೇ ಈರೀತಿ ಅಗೆದಿದ್ದಾರಾ.? ಅಥವಾ ಬೇರೆ ಇನ್ನೇನಾದರೂ ಕಾರಣಗಳು ಇವೆಯೇ ಎಂಬುದನ್ನ ಪತ್ತೆಹಚ್ಚಬೇಕಿದೆ.

Leave a Reply

Your email address will not be published. Required fields are marked *