ಕರಾವಳಿಯಲ್ಲಿ ಸದ್ಯ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನೊಂದೆಡೆ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿದ್ದು ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತಿದೆ. ಆದ್ರೆ ಈ ಸೌಂದರ್ಯವನ್ನ ಕಣ್ತುಂಬಿಕೊಳ್ಳೋದಕ್ಕೆ ಅಂತಾ ನೀವೇನಾದ್ರೂ ಉತ್ತರಕನ್ನಡಕ್ಕೆ ಪ್ರವಾಸಕ್ಕೆ ಬರಬೇಕು ಅಂದುಕೊಂಡಿದ್ದರೆ ಸದ್ಯಕ್ಕೆ ಬರದೇ ಇರೋದೇ ಒಳ್ಳೆಯದು.! ಯಾಕಂದ್ರೆ ಜಿಲ್ಲೆಯ ಕೆಲವೊಂದು ಜಲಪಾತಗಳಿಗೆ ಇದೀಗ ಪ್ರವಾಸಿಗರ ಪ್ರವೇಶವನ್ನ ನಿಷೇಧಿಸಲಾಗಿದೆ.
ಮೈದುಂಬಿ ಹರಿಯುತ್ತಿರುವ ಜಲಪಾತಗಳು.!
ಹೌದು.! ಮಳೆಗಾಲ ಬಂತು ಅಂದ್ರೆ ಸಾಕು ಜಿಲ್ಲೆಯ ಹತ್ತಾರು ಜಲಪಾತಗಳು ಮೈದುಂಬಿಕೊಳ್ಳುತ್ತವೆ. ಹಚ್ಚಹಸಿರಿನ ಪರಿಸರದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳ ಮನಮೋಹಕ ದೃಶ್ಯಗಳನ್ನ ಕಣ್ತುಂಬಿಕೊಳ್ಳುವುದೇ ಸ್ವರ್ಗ. ಹೀಗಾಗಿಯೇ ಮಳೆಗಾಲ ಆರಂಭವಾದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಯತ್ತ ಮುಖಮಾಡುತ್ತಾರೆ. ಆದ್ರೆ ಈ ಬಾರಿ ಹೀಗೆ ಪ್ರವಾಸಕ್ಕೆ ಬರುವವರಿಗೆ ನಿರಾಸೆಯಾಗೋದು ಖಂಡಿತ. ಯಾಕಂದ್ರೆ ಕೆಲವೊಂದು ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ.
ಫಾಲ್ಸ್ ಗಳನ್ನ ನೋಡಲು ಸದ್ಯ ಬರಬೇಡಿ ಎಂದ ಜಿಲ್ಲಾಡಳಿತ.!
ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು ನದಿಗಳು ಉಕ್ಕಿ ಹರಿಯುತ್ತಿವೆ. ಜೊತೆಗೆ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲ ಜಲಪಾತಗಳು ಮೈದುಂಬಿ ನಯನಮನೋಹರ ದೃಶ್ಯವನ್ನ ಕಟ್ಟಿಕೊಡುತ್ತಿವೆ. ಆದರೆ ಇದರೊಂದಿಗೆ ಕೆಲವೊಂದು ಜಲಪಾತಗಳ ಬಳಿ ಸೂಕ್ತ ಸುರಕ್ಷತೆ ಇಲ್ಲವಾಗಿದ್ದು ನೀರಿನ ಹರಿವು ಹೆಚ್ಚಿರುವ ಸಂದರ್ಭದಲ್ಲಿ ಸಣ್ಣ ನಿರ್ಲಕ್ಷ್ಯ ಸಹ ಪ್ರಾಣಕ್ಕೇ ಸಂಚಕಾರ ತರಬಹುದು. ಹೀಗಾಗಿ ಜಿಲ್ಲೆಯ ನಾಗರಮಡಿ, ಗೋಲಾರಿ ಹಾಗೂ ಅಂಕೋಲಾ ತಾಲ್ಲೂಕಿನ ವಿಭೂತಿ ಜಲಪಾತ ಸೇರಿದಂತೆ ಕೆಲವೊಂದು ಜಲಪಾತಗಳಿಗೆ ಪ್ರವಾಸಿಗರು ಆಗಮಿಸದಂತೆ ನಿಷೇಧ ಹೇರಲಾಗಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳು ನೋಡಲು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿಯೂ ಆಗಿರುತ್ತವೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜಲಪಾತದಿಂದ ಧುಮ್ಮಿಕ್ಕುವ ನೀರಿನ ವೇಗ ಸಹ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಮೋಜು ಮಸ್ತಿಗೆ ತೆರಳುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ.! ಅಲ್ಲದೇ ಪ್ರವಾಸಿಗರು ಈಜಲು ತೆರಳುವುದು, ಸೆಲ್ಫಿಗಾಗಿ ಮುಗಿಬೀಳುವುದು ಅಪಾಯಕಾರಿಯಾಗಲಿದೆ.
ಕಳೆದ ಕೆಲ ವರ್ಷಗಳ ಹಿಂದೆ ಕಾರವಾರದ ನಾಗರಮಡಿ ಜಲಪಾತದ ಬಳಿಕ ನೀರಿನಲ್ಲಿ ಪ್ರವಾಸಿಗರು ಆಟವಾಡುತ್ತಿದ್ದ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಐವರು ಸಾವನ್ನಪ್ಪಿದ್ದರು. ಹೀಗಾಗಿ ಜಲಪಾತಗಳಿಗೆ ಪ್ರವೇಶ ನಿರ್ಭಂದಿಸಲಾಗಿದೆ. ಆದರೂ ಸಹ ಸಾಕಷ್ಟು ಮಂದಿ ಪ್ರವಾಸಿಗರು ಬಂದು ಜಲಪಾತ ನೋಡಲಾಗದೇ ವಾಪಸ್ಸಾಗುತ್ತಿದ್ದಾರೆ.
ಕಡಲತೀರಗಳೂ ಅಪಾಯಕಾರಿ.!
ಇನ್ನು ಸದ್ಯ ಕಡಲತೀರಗಳಲ್ಲಿ ಆಳೆತ್ತರದ ಅಲೆಗಳು ಅಪ್ಪಳಿಸುವುದರಿಂದಾಗಿ ಬೀಚ್‌ಗಳೂ ಸಹ ಅಪಾಯಕಾರಿಯಾಗಿದ್ದು ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಕಡಲತೀರದಲ್ಲಿ ಕೆಂಪು ಬಾವುಟ ಹಾಕಿ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಇನ್ನೂ ಕೆಲವುದಿನ ಪ್ರವಾಸಿಗರು ಕಡಲತೀರ ಹಾಗೂ ಜಲಪಾತಗಳಿಂದ ಕೊಂಚ ದೂರವಿರೋದೇ ಉತ್ತಮ.