ಕುಮಟಾ: ಒಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. ಇನ್ನೊಂದೆಡೆ ಮಳೆಯ ನಡುವೆ ಆಗಾಗ ಕಾಣಿಸಿಕೊಳ್ಳುತ್ತಿರುವ ಬಿಸಿಲು. ಈ ರೀತಿ ಪ್ರಕೃತಿ ವೈಪರೀತ್ಯದಿಂದಾಗಿ ತಾಲೂಕಿನ ಅಡಿಕೆ ತೋಟಗಳಲ್ಲಿ ವ್ಯಾಪಕ ಪ್ರಮಾಣದ ಕೊಳೆ ರೋಗ ಕಾಣಿಸಿಕೊಂಡು ರೈತರು ಬೆಳೆ ನಾಶದ ಭೀತಿ ಎದುರಿಸುತ್ತಿದ್ದಾರೆ.
ಶೇ 50 ರಷ್ಟು ಉದುರಿದ ಅಡಿಕೆ.!
ಹೌದು.! ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಕಳೆದ 20 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಬಿಸಿಲಿಗೆ ಅಡಿಕೆ ಕೊಳೆರೋಗಕ್ಕೆ ತುತ್ತಾಗಿ ಮರಗಳಿಂದ ಉದುರುತ್ತಿವೆ. ಹವಾಮಾನ ವೈಪರಿತ್ಯದಿಂದ ಈಗಾಗಲೇ ಶೇ. 50 ರಷ್ಟು ಬೆಳೆ ನೆಲಕಚ್ಚಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟದ ಸ್ಥಿತಿ ಅನುಭವಿಸುವಂತಾಗಿದೆ.
ಅಡಿಕೆ ಬೆಳೆಯ ಮೇಲೇ ಅವಲಂಬಿತವಾಗಿರುವ ಕುಟುಂಬಗಳು
ಯಾಣ, ಕತಗಾಲ, ಅಳಕೋಡ, ಮೂರೂರು, ಕಲ್ಲಬ್ಬೆ, ಸಂತೆಗುಳಿ, ಸೊಪ್ಪಿನಹೊಸಳ್ಳಿ, ಕೂಜಳ್ಳಿ, ವಾಲಗಳ್ಳಿ ಸುತ್ತಮುತ್ತಲಿನ ಭಾಗಗಳಲ್ಲಿ ಅಡಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿವೆ. ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಈ ವರ್ಷ ಮಾರುಕಟ್ಟೆಯಲ್ಲಿ ಉತ್ತಮ ದರವೇನೋ ಇತ್ತು. ಆದರೆ ಕೊಳೆರೋಗದಿಂದ ತೀವ್ರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಇದರಿಂದ ಬೆಲೆ ಇದ್ದರೂ ಬೆಳೆ ಕೈ ಸೇರದ ಸ್ಥಿತಿಯಲ್ಲಿದ್ದಾರೆ ರೈತರು. ಬೆಳೆ ಇದ್ದರೆ ಬೆಲೆಯಿಲ್ಲ, ಬೆಲೆ ಇದ್ದರೆ ಬೆಳೆಯಿಲ್ಲ ಎನ್ನುವಂತಾಗಿದೆ ಜಿಲ್ಲೆಯ ರೈತರ ಪರಿಸ್ಥಿತಿ. ಇನ್ನು ಬೋರ್ಡೋ ಸಿಂಪಡಣೆಯಿಂದ ಶೇ. 100 ರಷ್ಟು ಬೆಳೆ ರಕ್ಷಿಸಿಕೊಳ್ಳುವುದು ಅಸಾಧ್ಯ. ಜೊತೆಗೆ ಅತಿಯಾದ ಮಳೆಯಲ್ಲಿ ಮದ್ದು ಹೊಡೆಯುವುದೂ ಕಷ್ಟಸಾಧ್ಯ.
ಬೆಳೆಹಾನಿಗೆ ಸರ್ಕಾರ ಪರಿಹಾರ ಘೋಷಿಸಲಿ
ಕೇಂದ್ರ ಸರ್ಕಾರದ ಹವಾಮಾನ ಆಧಾರಿತ ಬೆಳೆವಿಮೆ ಜೊತೆೆಗೆ ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಹಿತ ಕಾಯಲು ಹೊಸ ಮಾರ್ಗಸೂಚಿ ತಯಾರಿಸಿದರೆ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಪ್ರಕೃತಿ ವಿಕೋಪದ ಅಡಿಯಲ್ಲಿ ಅಡಿಕೆ ಕೊಳೆ ರೋಗಕ್ಕೆ ಪರಿಹಾರ ನೀಡಲು ಅವಕಾಶವಿಲ್ಲ. ಹೀಗಾಗಿ ಬೆಳೆ ನಷ್ಟವನ್ನು ಪ್ರಕೃತಿ ವಿಕೋಪ ವ್ಯಾಪ್ತಿಯೊಳಗಡೆ ಸೇರ್ಪಡೆ ಮಾಡಬೇಕು. ಇಲ್ಲವಾದಲ್ಲಿ ಅಡಿಕೆ ಬೆಳೆಗಾರರಿಗೆ ಸರ್ಕಾರ ಅನ್ಯಾಯ ಮಾಡಿದಂತಾಗುತ್ತದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಉದುರಿ ನಷ್ಟವಾಗಿದೆ. ಇರುವ ಬೆಳೆಯನ್ನು ಸಂರಕ್ಷಿಸಿಕೊಳ್ಳಲು ಹರಸಾಸಪಡಬೇಕಾದ ಪರಿಸ್ಥಿತಿ ಇದೆ. ರೈತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.
ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಸುರಿದ ಮಳೆಯ ಆಧಾರದ ಮೇಲೆ ರೈತರಿಗೆ ಬೆಳೆವಿಮೆ ಪರಿಹಾರದ ಹಣ ಜಮೆಯಾಗುತ್ತದೆ. ಆದರೆ ಅಧಿಕಾರಿಗಳು ಗ್ರಾ.ಪಂನಲ್ಲಿ ನಿರ್ಮಿಸಿದ ಮಳೆ ಮಾಪಕ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೋ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿರಬೇಕು. ಯಾವುದೇ ಕಾರಣಕ್ಕೂ ಬೆಳೆಗಾರರಿಗೆ ಅನ್ಯಾಯವಾಗಲು ಅಧಿಕಾರಿಗಳು ಬಿಡಬಾರದು ಎನ್ನುತ್ತಾರೆ ರೈತರು.
ಕೊಳೆರೋಗದ ಬಗ್ಗೆ ಅಧಿಕಾರಿಗಳು ಏನಂತಾರೆ.?
‘ಬೋರ್ಡೋ ದ್ರಾವಣ ಸಿಂಪಡಣೆ ಮಾಡಿ ರೋಗವನ್ನು ಹತೋಟಿಗೆ ಇಟ್ಟುಕೊಳ್ಳುವುದು ಸೂಕ್ತ. ಮೈಲುತುತ್ತಕ್ಕೆ ಸಹಾಯ ಧನದ ಸೌಲಭ್ಯವಿದ್ದು, ಸೂಕ್ತ ದಾಖಲೆಗಳನ್ನು ತೋಟಗಾರಿಕಾ ಇಲಾಖೆಗೆ ನೀಡಿ, ಅದರ ಸೌಲಭ್ಯ ಪಡೆದುಕೊಳ್ಳಬೇಕು. ಈ ವರ್ಷ ಕಡಿಮೆ ಅರ್ಜಿಗಳು ಬಂದಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಸಹಾಯಧನದ ಸೌಲಭ್ಯ ಪಡೆದುಕೊಳ್ಳಬೇಕು. ಪ್ರಕೃತಿ ವಿಕೋಪದಿಂದ ಅಡಿಕೆ ಕೊಳೆ ರೋಗದ ಬಗ್ಗೆ ಮಾಹಿತಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ. ಅದರಂತೆ ಕೊಳೆ ರೋಗದ ಹಾನಿಯ ಬಗ್ಗೆ ಪರಿಶೀಲಿಸಿ ವರದಿ ಕಳುಹಿಸುತ್ತೇವೆ.’
– ಚೇತನ್ ನಾಯ್ಕ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ
ಅಡಿಕೆಗೆ ಉತ್ತಮ ದರವಿದ್ದ ಸಂದರ್ಭದಲ್ಲಿ ರೋಗ ಅಂಟಿಕೊಳ್ಳುತ್ತದೆ. ಇದು ಅಡಿಕೆ ಬೆಳೆಗಾರರಿಗೆ ಶಾಪದಂತಾಗಿದೆ. ಕೊಳೆ ರೋಗವನ್ನು ಪ್ರಕೃತಿ ವಿಕೋಪದ ಪರಿಹಾರದಲ್ಲಿ ಸೇರ್ಪಡೆಗೊಳಿಸಿ, ರೈತರಿಗೆ ರಾಜ್ಯ ಸರ್ಕಾರ ಅನುಕೂಲ ಒದಗಿಸಬೇಕು.
– ವಿನಾಯಕ ಭಟ್ಟ, ಸಂತೆಗುಳಿ, ಅಡಿಕೆ ಬೆಳೆಗಾರ
ಬೆಲೆ ಇದ್ದರೆ ಬೆಳೆಯಿಲ್ಲ, ಬೆಳೆ ಇದ್ದರೆ ಬೆಲೆಯಿಲ್ಲ.!
ಒಟ್ಟಾರೆ ಅಡಿಕೆ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೆಳೆಹಾನಿಯ ವಿವರವಾದ ವರದಿಯನ್ನ ಸರ್ಕಾರಕ್ಕೆ ನೀಡಬೇಕು. ಸರ್ಕಾರವೂ ಪರಿಹಾರ ನೀಡಿ ರೈತರ ಹಿತಕಾಯಬೇಕು. ಇನ್ನೊಂದೆಡೆ ತೋಟಗಾರಿಕಾ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ನಡೆಸಿ ಕೊಳೆರೋಗ ನಿವಾರಣೆಗೆ ಮುಂದಾಗಬೇಕು ಎಂಬುದು ರೈತರ ಆಗ್ರಹವಾಗಿದೆ.