ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಭೂಪಿಂದರ್ ಸಿಂಗ್ ಸೋಮವಾರ ಸಂಜೆ ಮುಂಬೈನ ಅಂಧೇರಿಯಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಭೂಪಿಂದರ್ ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಪತ್ನಿ ಮಿಥಾಲಿ ಸಿಂಗ್ ಮಾಹಿತಿ ನೀಡಿದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನಡೆಸುವುದಾಗಿ ತಿಳಿಸಿದ್ದಾರೆ.
ಭೂಪಿಂದರ್ ಅವರನ್ನು ಕಳೆದ ಹತ್ತು ದಿನಗಳ ಹಿಂದೆಯೇ ನಮ್ಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅದೇ ಸಮಯದಲ್ಲಿ ಅವರಿಗೆ ಕೊರೋನಾ ಕಾಣಿಸಿಕೊಂಡಿತು. ಹೀಗಾಗಿ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಸಂಜೆ 7:45 ಕ್ಕೆ ನಿಧನರಾದರು ಎಂದು ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಯ ನಿರ್ದೇಶಕ ಡಾ. ದೀಪಕ್ ನಾಮಜೋಶಿ ತಿಳಿಸಿದ್ದಾರೆ.
ಭೂಪಿಂದರ್ ಸಿಂಗ್ ಅವರು ದಿಲ್ ಡೂನ್ಡ್ ತಾ ಹೈ, ನಾಮ್ ಗಮ್ ಜಾಯೇಗಾ, ಏಕ್ ಅಕೇಲಾ ಈಸ್ ಶಾಹೆರ್ ಮೇ, ಬೀಟಿ ನಾ ಬೀಟೈ ರೈನಾ, ಬದಲೋನ್ ಸೇ ಕಾತ್ ಕಾಟ್ ಕೇ ಮುಂತಾದ ಹಾಡುಗಳಿಂದ ಹೆಸರುವಾಸಿಯಾಗಿದ್ದರು.