ಡಾಲರ್ ಎದುರು ದಾಖಲೆ ಕುಸಿತ ಕಂಡ ರೂಪಾಯಿ.!

ಅಮೇರಿಕನ್ ಡಾಲರ್ ಎದುರು ರೂಪಾಯಿ ದುರ್ಬಲಗೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 80ರ ಗಡಿ ದಾಟಿದ್ದು ದಾಖಲೆ ಕುಸಿತ ಕಂಡಿದೆ. ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾದ ನಂತರ ಡಾಲರ್ ಎದುರು ರೂಪಾಯಿ ಬೆಲೆ 7 ಪೈಸೆ ಕುಸಿದಿದ್ದು ರೂಪಾಯಿ ಮೌಲ್ಯ 80 ರೂ 05 ಪೈಸೆಯಾಗಿದೆ. ಇದೇ ಮೊದಲ ಬಾರಿಗೆ ಯುಎಸ್ ಡಾಲರ್ ವಿರುದ್ಧ ಭಾರತದ ರೂಪಾಯಿ ಬೆಲೆ 80 ರೂಪಾಯಿಗಿಂತ ಕಡಿಮೆಯಾಗಿದೆ. ಸೋಮವಾರ ರೂಪಾಯಿ ಮೌಲ್ಯದಲ್ಲಿ 16 ಪೈಸೆ ಕಡಿಮೆಯಾಗಿ 79 ರೂಪಾಯಿ 98 ಪೈಸೆಯಲ್ಲಿ ದಿನದ ವಹಿವಾಟು ಮುಕ್ತಾಯಗೊಂಡಿತ್ತು.

ರೂಪಾಯಿ ಮೌಲ್ಯ ಕುಸಿತದ ಬಗ್ಗೆ ವಿತ್ತ ಸಚಿವರು ಹೇಳಿದ್ದೇನು.?

ಇನ್ನು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡಿಸೆಂಬರ್ 31, 2014 ರಿಂದ ಭಾರತೀಯ ರೂಪಾಯಿ ಸುಮಾರು 25 ಪ್ರತಿಶತದಷ್ಟು ಕುಸಿದಿದೆ ಎಂದು ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷ, ಕಚ್ಚಾತೈಲದ ಬೆಲೆ ಏರಿಕೆ ಮತ್ತು ಜಾಗತಿಕ ಹಣಕಾಸು ಪರಿಸ್ಥಿತಿಗಳ ಬಿಗಿತದಂತಹ ಜಾಗತಿಕ ಅಂಶಗಳು ರೂಪಾಯಿ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ್ದಾರೆ.