ನವದೆಹಲಿ: ಬೆಲೆ ಏರಿಕೆ ಬಿಸಿಯಿಂದ ಈಗಾಗಲೇ ಜನ ಹೈರಾಣಾಗಿದ್ದು ಇದೀಗ ಕೇಂದ್ರ ಸರ್ಕಾರ ಜಿಎಸ್‌ಟಿ ದರವನ್ನ ಏರಿಸಲು ಮುಂದಾಗಿದೆ. ನಾಳೆಯಿಂದ ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದ್ದು ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಜಿಎಸ್‌ಟಿ ದರ ಏರಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಮಂಡಳಿ ನಿರ್ಧರಿಸಿದ್ದು, ಸೋಮವಾರದಿಂದಲೇ ಪರಿಷ್ಕೃತ ದರಗಳು ಜಾರಿಯಾಗಲಿವೆ. ಇದರಿಂದ ದಿನಬಳಕೆಯ ಅಗತ್ಯ ವಸ್ತುಗಳು, ಬ್ಯಾಂಕ್ ಸೇವೆ, ಆಸ್ಪತ್ರೆ, ಹೋಟೆಲ್ ಹಾಗೂ ಇತರೆ ವಸ್ತುಗಳು ದುಬಾರಿಯಾಗಲಿದೆ.
ಯಾವುದೆಲ್ಲ ದುಬಾರಿ.?
ಪ್ಯಾಕ್ ಮಾಡಲಾದ ಮೊಸಲು, ಲಸ್ಸಿ, ಮಜ್ಜಿಗೆ ಶೇ.5 ರಷ್ಟು ಏರಿಕೆಯಾಗಲಿದೆ. ಅಟ್ಲಾಸ್, ನಕ್ಷೆಗಳು, ಚಾರ್ಟ್ಗಳು, ದಿನಕ್ಕೆ 1 ಸಾವಿರ ರೂ.ಗಿಂತ ಕಡಿಮೆ ಶುಲ್ಕವಿರುವ ಹೋಟೆಲ್ ರೂಂಗಳು, ಚೆಕ್‌ಬುಕ್ ಅಥವಾ ಚೆಕ್‌ಲೀಫ್ ವಿತರಣೆಗೆ ಬ್ಯಾಂಕುಗಳು ವಿಧಿಸುವ ಶುಲ್ಕ ದುಬಾರಿಯಾಗಲಿದೆ.
ಇನ್ನು ದಿನಕ್ಕೆ 5,000 ರೂ.ಗಿಂತ ಹೆಚ್ಚು ಶುಲ್ಕವಿರುವ ಆಸ್ಪತ್ರೆಯ ಕೊಠಡಿ (ಐಸಿಯು ಹೊರತುಪಡಿಸಿ), ಎಲ್‌ಇಡಿ ಲೈಟ್‌ಗಳು, ಎಲ್‌ಇಡಿ ಲ್ಯಾಂಪ್, ಬ್ಲೇಡ್ ಇರುವ ಕತ್ತರಿ, ಪೇಪರ್, ಚಾಕು, ಪೆನ್ಸಿಲ್, ಶಾರ್ಪ್ನರ್, ಬ್ಲೇಡು, ಚಮಚಗಳು, ಫೋರ್ಕ್, ಕೇಕ್, ನೀರೆತ್ತುವ ಪಂಪ್, ಕೊಳವೆ ಬಾವಿಗೆ ಅಳವಡಿಸುವ ಟರ್ಬೈನ್ ಪಂಪ್, ಸಬ್‌ಮರ್ಸಿಬಲ್ ಪಂಪ್, ಬೈಸಿಕಲ್ ಪಂಪ್, ಬಿತ್ತನೆಬೀಜ, ಧಾನ್ಯಗಳು, ಗಿರಣಿಯಲ್ಲಿ ಅಥವಾ ಸಿರಿಧಾನ್ಯಗಳ ಕೆಲಸಕ್ಕೆ ಬಳಸುವ ಯಂತ್ರಗಳು ಇತ್ಯಾದಿ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ.