‘ಆಸ್ಪತ್ರೆಗಾಗಿ ಅಭಿಯಾನ’ದ ಸದ್ದಡಗಿಸಲು ಖಂಡಿತ ಸಾಧ್ಯವಿಲ್ಲ.! ಜನಪ್ರತಿನಿಧಿಗಳೇ ವ್ಯರ್ಥ ಪ್ರಯತ್ನ ಮಾಡಬೇಡಿ.!

ಉತ್ತರ ಕನ್ನಡ ಜಿಲ್ಲೆಯ ಜನರ ‘ಒಕ್ಕೊರಲ’ ಕೂಗು ‘ನಮ್ಮ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು’ ಎನ್ನುವುದು. ಇದು ಕೇವಲ ಇಂದು ನಿನ್ನೆಯ ಹೋರಾಟವಲ್ಲ. ದಶಕಗಳ ಹೋರಾಟ. ಹೌದು.! ಶಿರೂರು ಆಂಬುಲೆನ್ಸ್ ದುರಂತದ ಬಳಿಕ ಇದೀಗ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಕುರಿತು ‘ಗಟ್ಟಿಕೂಗು’ ಶುರುವಾಗಿದೆ. ಜಿಲ್ಲೆಯ ಹನ್ನೆರಡೂ ತಾಲೂಕುಗಳ ಜನ ಸುಸಜ್ಜಿತ ಆಸ್ಪತ್ರೆ ನಿರ್ಮಣಕ್ಕಾಗಿ ಆಗ್ರಹಿಸಿ ಹೋರಾಟಕ್ಕಿಳಿದಿದ್ದಾರೆ. ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಕುರಿತ ಒಂದು ಸಮಗ್ರ ವರದಿ ಇಲ್ಲಿದೆ ನೋಡಿ.

ಹೌದು.! ಕರಾವಳಿ, ಮಲೆನಾಡು, ಬಯಲು ಸೀಮೆ ಹೀಗೆ ವಿಶಿಷ್ಠ ಭೌಗೋಳಿಕ ಪ್ರದೇಶಗಳುಳ್ಳ ವಿಶಾಲ ಜಿಲ್ಲೆ ನಮ್ಮ ಹೆಮ್ಮೆಯ ಉತ್ತರ ಕನ್ನಡ. ಜಿಲ್ಲೆಯಲ್ಲಿರುವ ಅನೇಕ ಪ್ರಸಿದ್ಧ ತಾಣಗಳು ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತಿದೆ. ಇಷ್ಟೆಲ್ಲಾ ಹೆಗ್ಗಳಿಕೆಗಳಿದ್ದರೂ ಅಭಿವೃದ್ಧಿಯಲ್ಲಿ ಮಾತ್ರ ಜಿಲ್ಲೆಯು ಹಿಂದುಳಿದಿರುವುದು ದುರಾದೃಷ್ಟವೇ ಸರಿ. ಎಲ್ಲವೂ ಇದ್ದೂ ಏನೂ ಇಲ್ಲದ ಪರಿಸ್ಥಿತಿ ನಮ್ಮ ಜಿಲ್ಲೆಯದ್ದು.!

ಎಸ್.! ಜಿಲ್ಲೆಯಲ್ಲೊಂದು ಸುಸಜ್ಜಿತ ಆಸ್ಪತ್ರೆ ಇಲ್ಲ ಎನ್ನುವುದನ್ನ ನೀವು ನಂಬಲೇಬೇಕು.! ಈ ವಿಷಯದಲ್ಲಿ ನಾವು ಪರಾವಲಂಬಿ. ಆಸ್ಪತ್ರೆಗಾಗಿ ಪಕ್ಕದ ಉಡುಪಿಯೋ ಅಥವಾ ಮಂಗಳೂರನ್ನೋ ನೆಚ್ಚಿಕೊಳ್ಳಬೇಕು. ಇಲ್ಲವೇ ಗೋವಾ, ಹುಬ್ಬಳ್ಳಿ ಅಥವಾ ಶಿವಮೊಗ್ಗಕ್ಕೆ ಹೋಗಬೇಕು. ಆದರೆ ನಮ್ಮ ಜಿಲ್ಲೆಯಲ್ಲಿಯೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದ್ದರೆ ಬೇರೆ ಖಾಸಗಿ ಆಸ್ಪತ್ರೆಯ ಮೇಲೆ ಅವಲಂಬನೆಯಾಗಬೇಕಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜನ ಸಾಮಾನ್ಯನಿಗೂ ಗೊತ್ತು ಜನಪ್ರತಿನಿಧಿಗಳಿಗೂ ಪರಿಸ್ಥಿತಿಯ ಅರಿವಿದೆ. ಆದರೆ ಇಷ್ಟೆಲ್ಲಾ ವರ್ಷಗಳಿಂದ ರಾಜಕಾರಣಿಗಳು ಜಾಣ ಮೌನ ವಹಿಸಿದ್ದು ಯಾಕೆ.? ಎನ್ನುವ ಪ್ರಶ್ನೆ ಎಲ್ಲರದ್ದು.

ಅಪಘಾತಗಳಾದರೆ ಅಥವಾ ಎಮರ್ಜೆನ್ಸಿ ಅವಶ್ಯಕತೆಗಳಿಗೆ ಒಂದು ಒಳ್ಳೆಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕೆಂದರೆ ಸುಮಾರು 150 ರಿಂದ 200 ಕಿಮೀ ಪ್ರಯಾಣಿಸಬೇಕು. ತುರ್ತು ಚಿಕಿತ್ಸೆಗಾಗಿ ಅಷ್ಟು ದೂರ ಹೋಗುವುದರೊಳಗೆ ರೋಗಿಯು ಬದಿಕುಳಿದರೆ ಅದೇ ದೊಡ್ಡದು.! ಆದರೆ ಅಷ್ಟು ದೂರ ತೆರಳುವಾಗ ಪ್ರಾಣ ಕಳೆದುಕೊಂಡ ನಿದರ್ಶನಗಳೇ ಹೆಚ್ಚು. ಇತ್ತೀಚೆಗೆ ನಡೆದ ಶಿರೂರು ಟೋಲ್ ಗೇಟ್ ದುರಂತದ ಬಳಿಕವೂ ಇದೇ ವಿಚಾರ ಮುನ್ನೆಲೆಗೆ ಬಂತು. ಜಿಲ್ಲೆಯಲ್ಲಿಯೇ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದ್ದರೆ 4 ಜನರ ಜೀವ ಉಳಿಯುತ್ತಿತ್ತು ಎನ್ನುವುದು ಹಲವರ ಅಭಿಪ್ರಾಯ.

ಇನ್ನು ಆಸ್ಪತ್ರೆ ಅಗತ್ಯತೆಯ ಬಗ್ಗೆ ಈ ಬಾರಿಯ ಹೋರಾಟ ಪ್ರಬಲವಾಗಿಯೇ ಇದೆ. ಆಸ್ಪತ್ರೆ ನಿರ್ಮಾಣವಾಗದಿದ್ದರೆ ಜಿಲ್ಲೆಯ ಜನ ಚುನಾವಣಾ ಬಹಿಷ್ಕಾರಕ್ಕೂ ಸಿದ್ಧ ಎಂಬ ಸಂದೇಶವನ್ನ ನೀಡಿದ್ದಾರೆ. ಜನರ ತಾಳ್ಮೆಯನ್ನ ಎಷ್ಟು ಅಂತ ಪರೀಕ್ಷೆ ಮಾಡುವುದು ಅಲ್ವಾ.? ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗಿರುವಾಗಲೇ ಜನರಿಂದ ವ್ಯಕ್ತವಾದ ಆಕ್ರೋಶ ಸಹಜವಾಗಿಯೇ ರಾಜಕಾರಣಿಗಳಲ್ಲಿ ಭಯ ಉಂಟುಮಾಡಿದೆ.

2019 ರಲ್ಲೂ ಆಸ್ಪತ್ರೆಗಾಗಿ ಇದೇ ರೀತಿ ಹೋರಾಟ ನಡೆದಿತ್ತು. ಆಗ ಅಧಿಕಾರದಲ್ಲಿದ್ದ ಕುಮಾರಸ್ವಾಮಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆಮೇಲೆ ಅಭಿಯಾನದ ಕಾವು ತಣ್ಣಗಾಗಿತ್ತು. ಆದರೆ ಈ ಬಾರಿ ಮಾತ್ರ ಆಸ್ಪತ್ರೆ ನಿರ್ಮಾಣ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ಗಟ್ಟಿ ನಿರ್ಧಾರಕ್ಕೆ ಜಿಲ್ಲೆಯ ಜನ ಬದ್ಧರಾಗಿದ್ದಾರೆ.

ಇನ್ನು ಈ ಬಾರಿಯ ಹೋರಾಟಕ್ಕೆ ಇನ್ನಷ್ಟು ಧ್ವನಿ ಗಟ್ಟಿಯಾಗಿಸಿದ್ದು ಸಾಮಾಜಿಕ ಜಾಲತಾಣ. ಹೌದು. ಫೇಸ್‌ಬುಕ್ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ರಾಜಕಾರಣಿಗಳು, ಸಿನಿಮಾ ನಟರು, ಸೆಲೆಬ್ರೆಟಿಗಳೂ ಅಭಿಯಾನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಹೀಗಾಗಿ ಈ ಅಭಿಯಾನ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಜಿಲ್ಲೆಯ ಕೂಗು ದಿಲ್ಲಿ ತಲುಪಿದೆ.

ರಾಜಕಾರಣಿಗಳೇನೋ ಈ ಕೂಗನ್ನ ವ್ಯವಸ್ಥಿತವಾಗಿ ಅಡಗಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಈ ಬಾರಿ ಅವರ ಮಾತನ್ನ ಕೇಳುವ ಸ್ಥಿತಿಯಲ್ಲಿ ನಮ್ಮ ಜಿಲ್ಲೆಯ ಮಂದಿಯಿಲ್ಲ. ಇಷ್ಟೆಲ್ಲಾ ತೆರಿಗೆಯನ್ನ ಕಟ್ಟುವ ಸಾರ್ವಜನಿಕರಿಗೆ ಒಂದು ಸುಸಜ್ಜಿತ ಆಸ್ಪತ್ರೆಯನ್ನ ಕಟ್ಟಿಸಲು ಸರ್ಕಾರದಿಂದ ಸಾಧ್ಯವಿಲ್ಲವೇ.? ಅಥವಾ ಸುತ್ತಮುತ್ತಲ ಖಾಸಗಿ ಆಸ್ಪತ್ರೆಗಳ ಲಾಬಿ ಆಸ್ಪತ್ರೆಯಾಗದಿರಲು ಕಾರಣವೇ ಎಂಬುದು ಹಲವರ ಪ್ರಶ್ನೆ.

ಅದೇನೇ ಇರಲಿ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಅಷ್ಟೇ.! ಜನರ ಜೀವಕ್ಕೆ ಬೆಲೆಯಿಲ್ಲವೇ.? ‘ಕ್ರಮ ಕೈಗೊಳ್ಳುವುದು’ ‘ಚರ್ಚಿಸುವುದು’ ‘ಭರವಸೆ ನೀಡುವುದು’ ಇಂತಹ ಕೆಲಸಕ್ಕೆ ಬಾರದ ಮಾತುಗಳನ್ನ ಕೇಳಿ ಕೇಳಿ ಜನ ರೋಸಿ ಹೋಗಿದ್ದಾರೆ. ಒಂದುವೇಳೆ ಆಸ್ಪತ್ರೆ ನಿರ್ಮಿಸಿಕೊಡದಿದ್ದರೆ ಈ ಬಾರಿ ಜನರ ಧ್ವನಿ ಅಡಗಿಸುವದಕ್ಕಂತೂ ಸಾಧ್ಯವಿಲ್ಲ. ತಮ್ಮ ರಾಜಕೀಯ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುವ ಮುನ್ನ ಘಟಾನುಘಟಿ ನಾಯಕರೇ ಒಮ್ಮೆ ಎಚ್ಚರಗೊಳ್ಳಿ.!!