ಅಂಕೋಲಾ: ವಿದ್ಯುತ್ ವಿಧೇಯಕ 2022 ವಾಪಸ್ಸಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ಕೇಂದ್ರ ಸರಕಾರ ಆ. 8 ರಂದು ದೇಶದ ಜನತೆಯ ಪ್ರಬಲ ವಿರೋಧದ ನಡುವೆಯು ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ತಿದ್ದುಪಡಿ ವಿಧೇಯಕ 2022 ನ್ನು ಕೂಡಲೇ ವಾಪಸ್ಸು ಪಡೆಯುವಂತಾಗಬೇಕು.
ವಿದ್ಯುತ್ ವಿಧೇಯಕವು ರೈತರು, ಕಾರ್ಮಿಕರು, ಕೂಲಿಕಾರರಿಗೆ ಮಾತ್ರವಲ್ಲ ವಿದ್ಯುತ್ ಕಂಪನಿ ನೌಕರರಿಗೆ ಆಪತ್ತು ಉಂಟುಮಾಡಲಿದೆ. ನೂತನ ವಿಧೇಯಕವು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೊಸ ವಿಧೇಯಕ ವಾಪಸ್ಸಿಗೆ ಈಗಾಗಲೇ 27 ಲಕ್ಷ ವಿದ್ಯುತ್ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಯುಕ್ತ ಕಿಶಾನ್ ಮೋರ್ಚಾಕ್ಕೆ ಕೊಟ್ಟ ಭರವಸೆಯನ್ನು ಉಲ್ಲಂಘಿಸಿ ತರಾತುರಿಯಲ್ಲಿ ಅಧಿವೇಶನದ ಕೊನೆಯ ದಿನ ಇಂಧನ ಸಚಿವರು ಜನವಿರೋಧಿ ವಿದ್ಯುತ್ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿರುವುದು ಖಂಡನೀಯ ಎಂದರು.
ಸಂಘದ ಕಾರ್ಯದರ್ಶಿ ಸಂತೋಷ ನಾಯ್ಕ, ರಮಾನಂದ ನಾಯಕ ಅಚವೆ, ಉದಯ ನಾಯ್ಕ, ನಾಗಪ್ಪ ನಾಯ್ಕ, ಮಾದೇವ ಗೌಡ, ಗಣೇಶ ಪಟಗಾರ, ಶಿವರಾಮ ಪಟಗಾರ, ಸುಧಾಕರ ಜಾಂಬಾವಳಿಕರ ಸೇರಿದಂತೆ ಮೊದಲಾದರು ಉಪಸ್ಥಿತರಿದ್ದರು.