ಅಂಕೋಲಾ: ತಾಲೂಕಿನ ಬಸ್ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರಾಜ್ಯ ಕಳ್ಳರನ್ನು ಅಂಕೋಲಾ ಪೊಲೀಸರು ಬಂಧಿಸಿ, ಕಳ್ಳತನ ಮಾಡಿದ 7 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಪಡಿಸಿಕೋಡ ಘಟನೆ ನಡೆದಿದೆ.
ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಕೇರಳ ಕಾಸರಗೋಡು ಟೋನಿ ಜಾನ್ ಜೇಮ್ಸ್ (34) ಮತ್ತು ಹುಬ್ಬಳ್ಳಿಯ ಗದಗ ರಸ್ತೆ ನಿವಾಸಿ ಮಹಮ್ಮದ್ ಅಲಿ ಮೆಹಬೂಬ್ ಸಾಬ ಕುಂದಗೋಳ(38) ಬಂಧಿತ ಆರೋಪಿಗಳು.
ಬಂಧಿತ ಮಹ್ಮದಲಿಯಿಂದ ಜಿಯೋ ಲೈಫ್ ಕೀ ಪ್ಯಾಡ್ ಮೊಬೈಲ್ ಪೋನ್, ಐಟೆಲ್ ಕಂಪನಿಯ ಕೀ ಪ್ಯಾಡ್ ಮೊಬೈಲ್ ಪೋನ್, ಓಪ್ಪೋ ಕಂಪನಿಯ ಎ 15 ಎಸ್ ಹ್ಯಾಂಡ್ ಸೆಟ್ ಮತ್ತು 1260 ರೂಪಾಯಿ ನಗದು ಹಣ ವಶ ಪಡಿಸಿಕೊಳ್ಳಲಾಗಿದೆ. ಇನ್ನೊರ್ವ ಆರೋಪಿ ಟೋನಿ ಜೇಮ್ಸ್ ಎಂಬಾತನಿಂದ ರಿಯಲ್ ಮಿ ಸಿ 15 ಹ್ಯಾಂಡ್ ಸೆಟ್, ರೆಡ್ ಮಿ 10 ಹ್ಯಾಂಡ್ ಸೆಟ್ ಮತ್ತು ಸ್ಯಾಮ್ಸಂಗ್ ಕೀ ಪ್ಯಾಡ್ ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.
ಅಂಕೋಲಾ ಪಿ.ಎಸ್.ಐ ಮಹಾಂತೇಶ ವಾಲ್ಮೀಕಿ ಗಸ್ತು ಕರ್ತವ್ಯದ ನಿಮಿತ್ತ ಅಂಕೋಲಾ ಬಸ್ ನಿಲ್ದಾಣದ ಒಳಗೆ ಹೋಗಿದ್ದ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಆರೋಪಿಗಳು ಪೊಲೀಸ್ ಜೀಪ್ ಕಂಡೊಡನೆ ಬಸ್ ನಿಲ್ದಾಣದದಿಂದ ಓಡಿ ಹೋಗುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಬೆನ್ನುಹತ್ತಿದ ಪೊಲೀಸರು ಅವರನ್ನು ಹಿಡಿದು ವಿಚಾರಣೆ ನಡೆಸಿದ ವೇಳೆ, ಇವರು ಸಾರ್ವಜನಿಕರ ಮೊಬೈಲ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.