ಗಣೇಶನ ಮೂರ್ತಿ ತಯಾರಿಸಿ ಸೌಹಾರ್ದತೆಗೆ ಸಾಕ್ಷಿಯಾದ 2 ಮುಸ್ಲಿಂ ಕಂದಮ್ಮಗಳು.!

ಅಂಕೋಲಾ: ತಾಲೂಕಿನ ಕಾಕರಮಠದ ನಿವಾಸಿಗಳಾದ ಪ್ರಾಥಮಿಕ ಶಾಲೆಯಲ್ಲಿ ಅಭ್ಯಸಿಸುತ್ತಿರುವ 2 ಪುಟ್ಟ ಕಂದಮ್ಮಗಳು ಗಣೇಶನ ಮೂರ್ತಿ ತಯಾರಿಸಿ ತಮ್ಮ ಮನೆಯ ಕೊಠಡಿಯಲ್ಲಿಟ್ಟು ಪೂಜೆ ಸಲ್ಲಿಸುತ್ತಿದ್ದಾರೆ.

5 ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಸಪ್ಬರ್, ಮತ್ತು ಆತನ ಸಹೋದರಿ ಮದಿಹಾ ಈ ಮಣ್ಣಿನ ಗಣೇಶ ಮೂರ್ತಿ ತಯಾರಿಸಿದವರು. ಕುಟುಂಬದ ಎಲ್ಲರೂ ಸೇರಿ ಗಣೇಶನ ಮೂರ್ತಿ ಕುಳ್ಳಿರಿಸಿ ಹಬ್ಬ ಆಚರಿಸಿ ಸಂಭ್ರಮಿಸುತ್ತಾರೆ.

ನಾವು ಈ ಹಬ್ಬ ಆಚರಿಸೋಣ ಎನ್ನುವುದು ಈ ಪುಟ್ಟ ಮಕ್ಕಳ ಆಶಯ. ತಮ್ಮ ಮಕ್ಕಳ ಕಲೆಯ ಜೊತೆ ಮಕ್ಕಳ ಭಾವನೆಗೆ ಪ್ರೋತ್ಸಾಹ ನೀಡಿದ್ದೇವೆ ಎನ್ನುತ್ತಾರೆ ಆ ಪುಟ್ಟ ಮಕ್ಕಳ ತಂದೆ ಇಸ್ಮಾಯಿಲ್ ಶೇಖ್.

ಮೂಲತಃ ಯಲ್ಲಾಪುರದ ಇಸ್ಮಾಯಿಲ್ ಶೇಖ್ ಹಾಲಿ ಅಂಕೋಲಾ ಪೊಲೀಸ್ ಠಾಣೆಯ ಹವಾಲ್ದಾರ್ ಆಗಿದ್ದಾರೆ. ಆ ಪುಟ್ಟ ಮಕ್ಕಳ ತಾಯಿ ಪಿಡಿಓ ಆಗಿ ಹೊನ್ನೆಬೈಲ್ ಗ್ರಾ.ಪಂ.ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತನ್ನ ಮಗಳು ಈ ಮೊದಲು ಶಾಂತಿನಿಕೇತನ ಶಾಲೆಯಲ್ಲಿ ಕೃಷ್ಣ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೇಷಧಾರಿಯಾಗಿ ಪ್ರಥಮ ಬಹುಮಾನ ಪಡೆದಿದ್ದು ನಮಗೆ ಹೆಮ್ಮೆ ಎನ್ನುತ್ತಾರೆ ತಾಯಿ

– ಹಷ್ಮತ್ ಖಾನ್, ತಾಯಿ

ನಾವು ಭಾರತೀಯರು ನಮ್ಮಲ್ಲಿ ಯಾವುದೇ ಭೇದ ಭಾವ ಬೇಡ. ನಾವೆಲ್ಲರೂ ಅಂಕೋಲೆಯಲ್ಲಿ ಸಹೋದರತ್ವದಿಂದ ಬದುಕುತ್ತಿದ್ದೇವೆ.

– ಇಸ್ಮಾಯಿಲ್, ತಂದೆ