ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗೆ ಸಂಬಂಧಿಸಿದಂತೆ ಎಸ್‌ಎಲ್‌ಪಿ (ಸ್ಪೆಷಲ್ ಲೀವ್ ಪಿಟಿಷನ್ ನಂ.8586/2022) ಕುರಿತು ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.
ನ್ಯಾಯಮೂರ್ತಿಗಳಾದ ಜಸ್ಟೀಸ್ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟೀಸ್ ಎಂ. ಸುಂದರೇಷ ಅವರ ನ್ಯಾಯಪೀಠದ ಮುಂದೆ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ದೇವದತ್ತ ಕಾಮತ ಅವರ ನೇತೃತ್ವದ ಆರು ವಕೀಲರ ತಂಡ ಬಂದರು ವಿರೋಧಿ ಹೋರಾಟಗಾರರ ಪರವಾಗಿ ವಾದ ಮಂಡಿಸಿದರು. ಈ ವೇಳೆ ಉದ್ದೇಶಿತ ಬಂದರು ವಿವಾದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಚಾರಗಳು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಂದೆ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು. ಸುಪ್ರೀಂಕೋರ್ಟ್ ಗೆ ಸಲ್ಲಿಸಿ ಎಸ್ ಎಲ್ ಪಿ ವಿಚಾರವನ್ನು ರಾಷ್ಟ್ರೀಯ ಹಸಿರು ಪೀಠದ ಮುಂದೆ ಮಂಡಿಸಿ ಪರಿಹಾರ ಪಡೆಯಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಉಭಯ ಪಕ್ಷಗಳ ವಾದವನ್ನು ಆಲಿಸಿದ ನ್ಯಾಯಾಲಯವು ಸುಪ್ರೀಂಗೆ ಸಲ್ಲಿಸಿದ ಮೇಲ್ಮನವಿಯನ್ನು ಹಿಂದಕ್ಕೆ ಪಡೆದು ಬಂದರು ನಿರ್ಮಾಣ ವಿವಾದವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಕೊಂಡೊಯ್ಯಲು ಕಲ್ಪಿಸಿ ಆದೇಶಿಸಿದೆ. ವಾಣಿಜ್ಯ ಬಂದರು ವಿರೋಧಿ ಹೋರಾಟಗಾರರ ಪರ ಕಾಸರಕೋಡು ಹಸಿಮೀನು ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ಗಣಪತಿ ತಾಂಡೇಲ ಅವರು ಸುಪ್ರೀಂಕೋರ್ಟ್‌ಗೆ ಎಸ್‌ಎಲ್‌ಪಿ ಸಲ್ಲಿಸಿದ್ದರು.
ಹಸಿರು ನ್ಯಾಯಾಧಿಕರಣದ ಅಂತಿಮ ತೀರ್ಪಿನ ನಂತರವಷ್ಟೇ ಸುಪ್ರೀಂಕೋರ್ಟ್‌ಗೆ ಹೋಗಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ್, ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ, ಹೋರಾಟ ಸಮಿತಿಯ ಗಣಪತಿ ತಾಂಡೇಲ ತಿಳಿಸಿದ್ದಾರೆ.