ಪರಿಶಿಷ್ಟರಲ್ಲದವರಿಗೆ ಎಸ್.ಸಿ, ಎಸ್.ಟಿ ಪ್ರಮಾಣಪತ್ರ ನೀಡದಂತೆ ಆಗ್ರಹಿಸಿ ದಸಂಸ ಪ್ರತಿಭಟನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ/ವರ್ಗ ದವರಲ್ಲದವರಿಗೆ ಎಸ್.ಸಿ ಎಸ್.ಟಿ ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಅಂಬೇಡ್ಕರ ಸರ್ಕಲ್ ಬಳಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿಯ ಪದಾಧಿಕಾರಿಗಳು ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ಉತ್ತರ ಕನ್ನಡದಲ್ಲಿ ಪ್ರವರ್ಗ-1 ರಲ್ಲಿ ಬರುವ ಮೀನುಗಾರ ವೃತ್ತಿಯ ಮೊಗವೀರ ಹಾಗೂ ಮೊಗೇರರು ನೈಜ ಪರಿಶಿಷ್ಟ ಜಾತಿಯವರಲ್ಲ. ಆದರೂ ಕ್ಷೇತ್ರ ನಿರ್ಬಂಧ ತೆಗೆದು ಹಾಕಿದ ಕಾರಣದಿಂದ ಅವರಿಗೆ ಈ ಹಿಂದೆ ಎಸ್.ಸಿ ಪ್ರಮಾಣ ಪತ್ರವನ್ನು ಸರಕಾರ ನೀಡಿತ್ತು. ಆದರೆ ಆ ಬಳಿಕ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ಗ್ರಾಮ ಒಕ್ಕಲಿಗ, ಗ್ರಾಮ ಗೊಂಡ, ಗೌಡ, ಪಟಗಾರ ಮುಂತಾದ ಹಿಂದುಳಿದ ವರ್ಗ 1 ರಲ್ಲಿ ಬರುವ ಕೆಲವರು ಸುಳ್ಳು ದಾಖಲಾತಿ ಸೃಷ್ಟಿಸಿ, ಗೊಂಡ ಜನಾಂಗದವರು ಪಡೆಯುವ ಪರಿಶಿಷ್ಟ ವರ್ಗ ಪ್ರಮಾಣ ಪತ್ರವನ್ನು ಪಡೆದಿದ್ದು ಆ ಬಳಿಕ ಸರಕಾರ ವಿಷಯವನ್ನು ಮನಗಂಡು ಅದನ್ನು ನಿಲ್ಲಿಸಿದೆ.

ಇನ್ನು ಮುಂದೆಯೂ ಯಾವುದೇ ಕಾರಣಕ್ಕೆ ಅವರಿಗೆ ಎಸ್.ಸಿ. ಅಥವಾ ಎಸ್.ಟಿ ಪ್ರಮಾಣ ಪತ್ರ ನೀಡಕೂಡದು. ಈಗಾಗಲೇ ಈ ರೀತಿ ಸುಳ್ಳು ಪ್ರಮಾಣ ಪತ್ರ ಪಡೆದಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಇದು ಮುಂದುವರಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತೆ ಎಂದು ಎಚ್ಚರಿಸಿದರು.

ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ರವಾನಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಶಿವಾನಂದ, ಮಂಜುನಾಥ, ಬಸವರಾಜ, ಫಕೀರಪ್ಪ ಸೇರಿದಂತೆ ಹಲವಾರು ಮಂದಿ ಇದ್ದರು.