ಕಾರವಾರ: ಮುಂಡಗೋಡ ತಾಲೂಕಿನ ಕಾತೂರು ಗ್ರಾಮ ಪಂಚಾಯತ್‌ನ ಆಲಳ್ಳಿಯ ಟ್ರೆಂಚ್ ಕಾಮಗಾರಿ ಸ್ಥಳದಲ್ಲಿ ಸೋಮವಾರ ರೋಜಗಾರ್ ದಿನ ಆಚರಿಸಲಾಯಿತು. ಈ ವೇಳೆ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ನರೇಗಾ ಯೋಜನೆಯಡಿ ನೀಡಲಾಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಮಾನ ಕೆಲಸ ಸಮಾನ ಕೂಲಿ, ಫಲಾನುಭವಿಗಳ ನೇರಖಾತೆಗೆ ಹಣ ಪಾವತಿ, ಕೆಲಸದ ಸ್ಥಳದಲ್ಲಿ ನೀರು ಮತ್ತು ನೆರಳು, ಉದ್ಯೋಗಖಾತ್ರಿ ಕೆಲಸದ ವೇಳೆಯಲ್ಲಿ ಮರಣಕ್ಕೀಡಾದರೆ ಇಲ್ಲವೇ ಶಾಶ್ವತವಾಗಿ ಅಂಗ ವೈಕಲ್ಯತೆ ಕಂಡು ಬಂದಲ್ಲಿ 2 ಲಕ್ಷ ರೂ. ಗಳ ಪರಿಹಾರಧನ ನೀಡಲಾಗುವುದು. ಅಲ್ಲದೇ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಮಳೆಗಾಲದಲ್ಲಿಯೂ ಕೆಲಸ ನೀಡಿ, ಅನುಕೂಲ ಕಲ್ಪಿಸಲಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅರಣ್ಯ ಪ್ರದೇಶದಲ್ಲಿ ಇಂಗುಗುಂಡಿ, ಕಾಲುವೆ ನಿರ್ಮಾಣ, ಕೆರೆ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಸಾಮೂಹಿಕ ಕಾಮಗಾರಿಗಳಿಗೆ ಆದ್ಯತೆ ನೀಡಿದಂತೆಯೇ ವೈಯಕ್ತಿಕ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದು ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕಿದೆ. ಮಳೆಗಾಲದಲ್ಲಿ ಕೂಲಿಕಾರರಿಗೆ ಕೆಲಸದ ಅನಿವಾರ್ಯತೆ ಇರುವುದರಿಂದ ಈ ವೇಳೆಯಲ್ಲಿ ಅರಣ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಕಾಮಗಾರಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಎನ್.ಎಮ್.ಎಮ್.ಎಸ್ ಆ್ಯಪ್ ಜಾರಿಗೊಳಿಸಿದ್ದು, ಕೂಲಿಕಾರರು ಇದಕ್ಕೆ ಸ್ಪಂದಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಂಜೀವಯ್ಯ ಹಿರೇಮಠ, ಬಿಎಪ್ ಟಿ ಉಷಾ ಹಾನಗಲ್, ಸಿಬ್ಬಂದಿ ಮಂಜುದಡ್ಡಿ ಮುಂತಾದವರಿದ್ದರು.