ಕಾರವಾರ: ನಗರದ ಬಾಡ ವ್ಯಾಪ್ತಿಯ ರಸ್ತೆಯ ಪಕ್ಕದಲ್ಲಿ ಯುವಕನೋರ್ವನ ಮೇಲೆ ಯುವಕರು ಅಮಾನುಷವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದರೂ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾತ್ರ ಕಾಲು ಜಾರಿ ಬಿದ್ದಿರುವ ಬಗ್ಗೆ ಪ್ರಕರಣ ದಾಖಲಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಆ. 21 ರಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ರಸ್ತೆಯ ಬದಿಗೆ ಯುವಕನೋರ್ವನನ್ನು ನೆಲಕ್ಕೆ ಕೆಡವಿ ಯುವಕರ ತಂಡವೊಂದು ಅವಾಚ್ಯ ಪದಗಳಿಂದ ಬೈಯ್ದು ಕೈ, ಕಾಲುಗಳಿಂದ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ವಿಡಿಯೋ ಎಲ್ಲಿಯದು ಎಂದು ಪತ್ತೆಹಚ್ಚಲು ಮುಂದಾದಾಗ ನಂದನಗದ್ದಾ-ಬಾಂಡಿಶಿಟ್ಟಾ ರಸ್ತೆಯ ಮಧ್ಯ ಪಾದ್ರಿಭಾಗದ ಬಾಡ ಐಟಿಐ ಕಾಲೇಜು ಬಳಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಪೊಲೀಸರನ್ನು ವಿಚಾರಿಸಿದಾಗ ತಿಳಿದು ಬಂದ ಮಾಹಿತಿ ಎಂದರೆ ಈ ಘಟನೆ ಆ.11 ಕ್ಕೆ ನಡೆದಿದ್ದು ಆ.14 ರಂದು ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣದ ತನಿಖೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ದಾಖಲಾಗಿರುವ ದೂರನ್ನು ಗಮನಿಸಿದಾಗ ಆಶ್ಚರ್ಯಕರವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ ದೂರಿನಲ್ಲಿ ಇರುವುದೇ ಬೇರೆ.
ಹಲ್ಲೆಗೊಳಗಾಗಿರುವ ವ್ಯಕ್ತಿ ನಾಗಾವಾಡದ ಪ್ರಕಾಶ ಮಹಾಬಲೇಶ್ವರ ನಾಯ್ಕ ಎಂಬಾತನಾಗಿದ್ದು ಈತನು ಆ.10 ರಂದು ಪಾದ್ರಿಬಾಗದ ಕಿರಾಣಿ ಅಂಗಡಿಯಲ್ಲಿ ಸಿಗರೇಟು ಕೇಳಲು ಹೋದಾಗ ಅಂಗಡಿ ಮಾಲಕ ದೀಪಕ ಬಿಣಗೇಕರ ಜೊತೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಮಾರನೇ ದಿನ ಆ.11 ರಂದು ಸಂಜೆ ಮತ್ತೆ ಪ್ರಕಾಶ ನಾಯ್ಕ ಅದೇ ದಾರಿಯಲ್ಲಿ ಹೋಗುತ್ತಿರುವಾಗ ಅಂಗಡಿಯಲ್ಲಿ ಇದ್ದವರು ಈತನಿಗೆ ಅವಾಚ್ಯವಾಗಿ ಬೈಯ್ದಿದ್ದಾರೆ.
ಈ ಬಗ್ಗೆ ವಿಚಾರಿಸಲೆಂದು ಅಂಗಡಿಗೆ ಪ್ರಕಾಶ ಹೋದಾಗ ಅಲ್ಲಿದ್ದ ದೀಪಕ ಬಿಣಗೇಕರ, ಕಾರ್ತಿಕ ನಾಯ್ಕ ಹಾಗೂ ಸೂರ್ಯಕಾಂತ ಕಳಸ ಎನ್ನುವವರು ಹೊಡೆಯಲು ಬಂದಾಗ ತಪ್ಪಿಸಿಕೊಂಡು ಓಡಿ ಬರುತ್ತಿದ್ದಾಗ ಮಳೆಗಾಲದಲ್ಲಿ ನೀರು ಹರಿಯಲು ಮಾಡಿದ ಗಟಾರದಲ್ಲಿ ಬಿದ್ದು ಕೈ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾನೆ. ಆ ಬಳಿಕ ಹೊಡೆಯಲು ಬಂದ ಆರೋಪಿಗಳು ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ವಿಡಿಯೋದಲ್ಲಿ ಮಾತ್ರ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿ ಕಂಡು ಬಂದರೂ ಪ್ರಕರಣ ಮಾತ್ರ ಯಾಕೆ ಹೀಗೆ ತಿರುಚಲಾಗಿದೆ ಎಂಬ ಬಗ್ಗೆ ಈಗ ಎಲ್ಲೆಡೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ.