ತರಬೇತಿ ಕೇಂದ್ರಕ್ಕೆ ಆಯ್ಕೆ ಪ್ರಕ್ರಿಯೆ: ಜಿಲ್ಲೆಯ ಕ್ರೀಡಾಪಟುಗಳು ಪಾಲ್ಗೊಳ್ಳಲು ಸೂಚನೆ

ಕಾರವಾರ: ಬೆಂಗಳೂರಿನಲ್ಲಿ ಆ. 23 ಹಾಗೂ 24 ರಂದು ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಉತ್ತರ ಕನ್ನಡ ಜಿಲ್ಲೆಯ ಅರ್ಹ ಕ್ರೀಡಾಪಟುಗಳು ಭಾಗವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.

ಈ ಬಗ್ಗೆ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿ, ಖೇಲೋ ಇಂಡಿಯಾ ರಾಜ್ಯ ಉತ್ಕೃಷ್ಟತಾ ಕೇಂದ್ರ ವಿದ್ಯಾನಗರ ಬೆಂಗಳೂರು ಇಲ್ಲಿನ ತರಬೇತಿ ಕೇಂದ್ರಕ್ಕೆ ಅಥ್ಲೆಟಿಕ್ಸ್, ಶೂಟಿಂಗ್ ಹಾಗೂ ಈಜು ಕ್ರೀಡೆಗಳಲ್ಲಿ ಪ್ರತಿಭಾನ್ವಿತರಾಗಿರುವ ಹಾಗೂ ಪ್ರತಿಭೆಗಳನ್ನು ಆಯ್ಕೆ ಮಾಡುವ ಸಲುವಾಗಿ ಶ್ರೀ ಜಯ ಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ಕ್ರೀಡಾ ಶಾಲೆ, ವಿದ್ಯಾನಗರ, ಬೆಂಗಳೂರು ಕೇಂದ್ರಗಳಲ್ಲಿ ಆ. 23 ಮತ್ತು 24 ರಂದು ಆಯ್ಕೆ ಪ್ರಕ್ರಿಯೆಯನ್ನು ಸಂಘಟಿಸುತ್ತಿದೆ. ಜಿಲ್ಲೆಯ ಅರ್ಹ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಾನ್ವಿತರು ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು.

ಆಸಕ್ತ 14 ವರ್ಷ ಮೇಲ್ಪಟ್ಟು 23 ವರ್ಷದೊಳಗಿನ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರ ಹಾಗೂ ಸಂಬಂಧಿಸಿದ ದಾಖಲೆಗಳ ಮತ್ತು ಸ್ವವಿವರದ ಅರ್ಜಿಯನ್ನುಆಯ್ಕೆ ಸಂದರ್ಭದಲ್ಲಿ ಸಲ್ಲಿಸಬೇಕು. ಆಯ್ಕೆಗೆ ಹಾಜರಾಗುವ ಕ್ರೀಡಾಪಟುಗಳಿಗೆ ಯಾವುದೇ ದಿನ ಭತ್ಯೆ, ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 9480886551 ಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.