ವಿದ್ಯಾರ್ಥಿಗಳ ರಕ್ಷೆ ತೆಗೆಸಿದ್ದನ್ನ ಖಂಡಿಸುತ್ತೇನೆ – ಶಾಂತಾರಾಮ ಸಿದ್ದಿ

ಮುಂಡಗೋಡ: ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿಯ ರಕ್ಷಾ ಬಂಧನದ ರಾಖಿಯನ್ನು ತೆಗೆದಿರುವುದನ್ನು ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಶುಕ್ರವಾರ ಸಂಘ ಪರಿವಾರದ ರಕ್ಷಾ ಬಂಧನ ಕಾರ್ಯಕ್ರಮ ಮುಗಿದ ನಂತರ ಶ್ರೀ ಸಾಯಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ ತಿಂಗಳಲ್ಲಿ ಹಿಜಾಬ್ ಗಲಾಟೆ ನೋಡಿದ್ದೇವೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಆದೇಶವಿಲ್ಲದೆ ಕೈಗೆ ಕಟ್ಟಿದ ರಕ್ಷಾ ಬಂಧನದ ರಕ್ಷೆಯನ್ನು ತೆಗೆಸಿರುವುದು ಹಾಗೂ ರಕ್ಷೆ ಕಟ್ಟಬೇಡಿ ಎನ್ನುವುದು ಯಾವ ಕಾರಣಕ್ಕೂ ಸರಿಯಲ್ಲ. ಅನೇಕ ಹಿಂದೂ ಸಮುದಾಯದ ಮಹಿಳೆಯರು ಬಳೆ ತೊಟ್ಟು, ಹಣೆಗೆ ಕುಂಕುಮವಿಟ್ಟು, ಜಡೆಗೆ ಹೂವು ಮುಡಿದುಕೊಂಡು ಬರುತ್ತಾರೆ. ಇದೆಲ್ಲಾ ಹಳೆಯ ಸಂಪ್ರದಾಯವಾಗಿದ್ದು, ಇದನ್ನು ಖಂಡಿಸುವ ಅಧಿಕಾರ ಯಾವ ಶಾಲೆಯ ಅಧಿಕಾರಿಗಳಿಗೆ ಹಾಗೂ ಸಂಸ್ಥೆಯವರಿಗೂ ಇರುವುದಿಲ್ಲ. ಅದರಲ್ಲೂ ಅನುದಾನ ಪಡೆದಿರುವ ಶಾಲೆಗಳಲ್ಲಿ ಇಂತಹದೆಲ್ಲ ನಡೆಯಬಾರದು. ಈ ಬಗ್ಗೆ ನಾನು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿಲ್ಲ. ಅವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಚರ್ಚಿಸುತ್ತೇನೆ. ಸಂಬಂದ ಪಟ್ಟ ಅಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಣೇಶ ಶಿರಾಲಿ, ಭರತ ಹದಳಗಿ, ಸಂತೋಷ ತಳವಾರ, ನಾಗರಾಜ ಗುಬ್ಬಕ್ಕನವರ, ಭಾಗು ಕಾತ್ರೋಟ್, ಪ್ರಕಾಶ ಅಜ್ಜಮ್ಮನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.