ಈ ಗ್ರಾಮದಲ್ಲಿ ಮುಸ್ಲಿಂಮರೇ ಇಲ್ಲದಿದ್ದರೂ ಮೊಹರಂ ಹಬ್ಬ ಆಚರಣೆ.!

ಮುಂಡಗೋಡ: ಮುಸ್ಲಿಂ ಸಮುದಾಯದ ಜನರೇ ಇಲ್ಲದ ಊರಲ್ಲಿ ಹಲವಾರು ದಶಕಗಳಿಂದ ಹಿಂದೂಗಳು ಸಂಭ್ರಮದಿಂದ ಮೊಹರಂ ಹಬ್ಬವನ್ನು ಆಚರಿಸುತ್ತಾ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವುದು ತಾಲೂಕಿನ ಅಜ್ಜಳ್ಳಿ ಹಾಗೂ ಬಸವನಕೊಪ್ಪ ಗ್ರಾಮದಲ್ಲಿ ನಡೆಯುತ್ತಿದೆ. ಮುಸಲ್ಮಾನರಿಲ್ಲದಿದ್ದರೂ ಎರಡು ಗ್ರಾಮಗಳಲ್ಲಿ ‘ಸಬ್ ಕಾ ಮಾಲಿಕ್ ಏಕ್ ಹೈ’ ಎನ್ನುತ್ತಾ ಹಿಂದೂಗಳು ಸಡಗರದಿಂದ ಮೊಹರಂ ಹಬ್ಬ ಆಚರಿಸುತ್ತಾರೆ.

ತಾಲೂಕಿನ ಸಾಲಗಾಂವ ಪಂಚಾಯಿತಿ ವ್ಯಾಪ್ತಿಯ ಅಜ್ಜಳ್ಳಿ, ಹಾಗೂ ನಾಗನೂರ ಪಂಚಾಯಿತಿ ವ್ಯಾಪ್ತಿಯ ಬಸವನಕೊಪ್ಪ ಎಂಬ ಎರಡು ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ವಾಸವಿಲ್ಲ. ನೂರಾರು ವರ್ಷಗಳ ಹಿಂದೆ ಈ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ಇದ್ದರು ಆಗ ಹಿಂದು, ಮುಸ್ಲಿಂ ಸಮುದಾಯದವರು ಸೇರಿ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ವರ್ಷಗಳು ಕಳೆದಂತೆ ಇಲ್ಲಿನ ಬೆರಳೆಣಿಕೆಯಷ್ಟು ಮುಸ್ಲಿಂ ಜನ ಕೆಲಸ ಅರಸಿ ಬೇರಡೆ ತೆರಳಿದರು. ಇದರಿಂದಾಗಿ ಹಲವಾರು ದಶಕಗಳಿಂದ ಈ ಗ್ರಾಮಗಳಲ್ಲಿ ಮುಸ್ಲಿಂ ಜನರಿಲ್ಲದಿದ್ದರೂ ಈ ಎರಡು ಗ್ರಾಮಗಳಲ್ಲಿ ಚಿಕ್ಕ ಮುಸ್ಲಿಂ ಮಂದಿರಗಳಿವೆ ಮುಸ್ಲಿಂ ಸಮುದಾಯದ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಹಬ್ಬವನ್ನು ಆಚರಿಸಲಾಗುತ್ತದೆ.

ಅಜ್ಜಳ್ಳಿಯಲ್ಲಿ ಹತ್ತು ಕೈ ದೇವರುಗಳಿವೆ ಇನ್ನೂ ಬಸವನಕೊಪ್ಪದಲ್ಲಿ ನಾಲ್ಕು ಕೈ ದೇವರು, ಒಂದು ಡೋಲಿ ದೇವರು ಇದೆ. ಅಜ್ಜಳ್ಳಿ ಗ್ರಾಮಸ್ಥರು ಸನಿಹದ ಹಿರಳ್ಳಿ ಗ್ರಾಮದಿಂದ ಹಾಗೂ ಬಸವನಕೊಪ್ಪದವರು ಪಕ್ಕದ ಸುಳ್ಳಳ್ಳಿ ಎಂಬ ಗ್ರಾಮದಿಂದ ಮೌಲಾನಾಗಳನ್ನು ಕರೆಸಿ ಪೂಜೆ ಸಲ್ಲಿಸುತ್ತಾರೆ. ಪೂಜೆಯನ್ನು ಹೊರತು ಪಡಿಸಿ ಉಳಿದೆಲ್ಲ ಕಾರ್ಯಗಳನ್ನು ಹಿಂದುಗಳು ಶ್ರದ್ಧಾ ಭಕ್ತಿಯಿಂದ ಮಾಡುತ್ತಾರೆ. ಹಬ್ಬದ ಹಿಂದಿನ ದಿನ ಮಂದಿರದ ಎದುರು ತೆಗೆದ ಹೊಂಡದಲ್ಲಿ ರಾತ್ರಿ ಕಟ್ಟಿಗೆ ಹಾಕಿ ಬೆಂಕಿ ಹಾಕುತ್ತಾರೆ. ನಂತರ ಸುಡುವ ಬೆಂಕಿಯಲ್ಲಿ ಭಕ್ತರು ದಾಟುತ್ತಾರೆ. ಹಬ್ಬದಂದು ದೇವರು ಹೊತ್ತವರು ಹಾಗೂ ಮಕ್ಕಳು ಸೇರಿದಂತೆ ಮುಂತಾದವರು ಬೆಂಕಿಯನ್ನು ದಾಟುತ್ತಾರೆ.