ಮುಂಡಗೋಡ: ಮುಂಡಗೋಡದಿಂದ ಹನುಮಾಪುರ ಗ್ರಾಮಕ್ಕೆ ತೆರಳುವ ರಸ್ತೆ ಸಂಪುರ್ಣ ಗುಂಡಿಮಯವಾಗಿದೆ. ವಾಹನ ಸವಾರರು ಸಂಚರಿಸಲಾಗದೇ ಪ್ರತಿ ದಿನ ಗುಂಡಿಗಳಲ್ಲಿ ಬಿದ್ದು ಎದ್ದು ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ.
ಹೌದು.! ಮುಂಡಗೋಡ ಪಟ್ಟಣದಿಂದ ಹನುಮಾಪುರ ಗ್ರಾಮಕ್ಕೆ 14 ಕಿ.ಮಿ ಅಂತರವಿದೆ. ಅದರಲ್ಲಿ ಕೇವಲ ನಾಲ್ಕೈದು ಕಿ.ಮಿ ರಸ್ತೆ ಮಾತ್ರವೇ ಚೆನ್ನಾಗಿದ್ದು ಉಳಿದ ರಸ್ತೆ ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿದೆ. ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸುವ ಜನ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾ ಓಡಾಡುವುದು ಸಾಮಾನ್ಯವಾಗಿದೆ.
ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ರಸ್ತೆ ಇದಾಗಿದ್ದು ಅಧಿಕಾರಿಗಳು ಕಣ್ಣಿಗೆ ಕಂಡು ಕಾಣದಂತೆ, ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಹಲವು ವರ್ಷಗಳಿಂದ ಈ ರಸ್ತೆಗೆ ಕಾಮಗಾರಿ ನೆಪದಲ್ಲಿ ವಿವಿಧ ಅನುದಾನದಲ್ಲಿ ಹಣ ಹಾಕಲಾಗುತ್ತಿದೆ. ಜೊತೆಗೆ ಕೆಲಸ ಮಾಡುವ ರೀತಿ ಬಿಲ್ ಕೂಡಾ ಪಾಸ್ ಮಾಡಲಾಗುತ್ತದೆ ಎಂಬುದು ಸ್ಥಳಿಯರ ಆರೋಪ. ಕಳೆದ 8-10 ವರ್ಷಗಳಿಂದ ಕಾಮಗಾರಿ ನೆಪದಲ್ಲಿ ಎಷ್ಟು ಹಣವನ್ನ ಖರ್ಚು ಮಾಡಿದ್ದಾರೆ ಎನ್ನುವುದು ಬಹಿರಂಗವಾಗಬೇಕಿದೆ. ಅಲ್ಲದೇ ಕಾಮಗಾರಿ ಹೆಸರಲ್ಲಿ ಯಾರೆಲ್ಲಾ ಲೂಟಿ ಮಾಡಿದ್ದಾರೆ ಎಂದು ತನಿಖೆಯಾಗಬೇಕಿದೆ ಎನ್ನುವುದು ಸ್ಥಳಿಯರ ಆಗ್ರಹ.
ನಮ್ಮ ಗ್ರಾಮದಿಂದ ಹನುಮಾಪುರಕ್ಕೆ ತೆರಳುವ ರಸ್ತೆ ಗುಂಡಿ ಬಿದ್ದಿದೆ. ಇದರಿಂದ ಜನರಿಗೆ ಓಡಾಡಲು ಆಗುತ್ತಿಲ್ಲ. ಹೆಚ್ಚಾಗಿ ರೈತರು ತಮ್ಮ ಹೊಲಗದ್ದೆಗಳಿಗೆ ಇದೇ ಮಾರ್ಗದಲ್ಲಿಯೇ ಓಡಾಡುತ್ತಾರೆ. ಆದಷ್ಟು ಬೇಗ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು
– ಪಾಂಡುರಂಗ ಪವಾರ್, ಲಕ್ಕೊಳ್ಳಿ ಗ್ರಾಮಸ್ಥ
ರಸ್ತೆ ಗುಂಡಿಯ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ. ನಾನು ಹೋಗಿ ಸ್ಥಳ ಪರಶೀಲನೆ ಮಾಡಿಕೊಂಡು ಬಂದಿದ್ದೇನೆ. ಗುತ್ತಿಗೆದಾರರಿಗೂ ಗುಂಡಿ ಮುಚ್ಚಲು ತಿಳಿಸಲಾಗಿದೆ. ಇನ್ನೂ ಎರಡು ದಿನಗಳಲ್ಲಿ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇವೆ.
– ಮಹಾದೇವಪ್ಪ ಹ್ಯಾಟಿ, ಪಿಡಬ್ಲ್ಯೂಡಿ ಎಇಇ