ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ತೆಗೆದು ಹಾಕುವ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ: ಜನಪ್ರತಿನಿಧಿಗಳ ತಾಲೂಕಾ ಒಕ್ಕೂಟ ಖಂಡನೆ

ಯಲ್ಲಾಪುರ: ಸರ್ಕಾರವು ಪ್ರಕಟಿಸಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ತೆಗೆದು ಹಾಕುವ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ ನಿಯಮವಾಗಿದೆ ಎಂದು ಗ್ರಾ.ಪಂ. ಜನಪ್ರತಿನಿಧಿಗಳ ತಾಲೂಕಾ ಒಕ್ಕೂಟ ಖಂಡಿಸಿದೆ.

ಈ ಕುರಿತು ಒಕ್ಕೂಟದ ಅಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿ ಒಕ್ಕೂಟದ ಪರವಾಗಿ ಗುರುವಾರ ಎಂಎಲ್ಸಿ ಗಣಪತಿ ಉಳ್ವೇಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಈ ನಿಯಮದಿಂದಾಗಿ, ಪಿಡಿಒ ಹೊರತು ಪಡಿಸಿ ಮೇಲಿನ ಎಲ್ಲಾ ಅಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಮೇಲೆ ದೂರು ದಾಖಲಿಸಿ ತನಿಖೆ ಮಾಡುವ ಅಧಿಕಾರ ಪಡೆಯುತ್ತಾರೆ.

ಜನರಿಂದ ಆಯ್ಕೆಯಾದ ಸದಸ್ಯರ ಸದಸ್ಯತ್ವವನ್ನು ಕಿತ್ತುಕೊಳ್ಳುವ, ಅಧಿಕಾರವನ್ನು ಈ ನಿಯಮ ಅಧಿಕಾರಿಗಳಿಗೆ ನೀಡಿದೆ. ಆದ್ದರಿಂದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸರ್ಕಾರ ವಿರೋಧಿ ನಿಯಮವನ್ನು ಒಕ್ಕೂಟ ವಿರೋಧಿಸುತ್ತದೆ. ಇದನ್ನು ಸರ್ಕಾರ ಹಿಂಪಡೆಯದಿದ್ದರೆ, ರಾಜ್ಯ ಒಕ್ಕೂಟದ ಅಡಿಯಲ್ಲಿ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.