ಶಿರಸಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬನವಾಸಿ ಮಧುಕೇಶ್ವರ ದೇವಾಲಯದ ನೂತನ ರಥ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಏಪ್ರಿಲ್ ಮೊದಲ ವಾರದಲ್ಲಿ ನಡೆಯುವ ರಥೋತ್ಸವದಲ್ಲಿ ನೂತನ ರಥ ಬಳಕೆ ಮಾಡುವ ಸಲುವಾಗಿ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲಾಗಿದೆ. ರಥ ನಿರ್ಮಾಣ ಪ್ರಗತಿಯ ಕುರಿತಂತೆ ದೇವಾಲಯದ ಆಡಳಿತ ಮಂಡಳಿ ಮತ್ತು ರಥ ನಿರ್ಮಾಣ ಸಮಿತಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
ಕಾರ್ಯಾಧ್ಯಕ್ಷ ಡಿ. ಡಿ. ಭಟ್ ನರೂರು ಮಾಹಿತಿ ನೀಡಿ, ಕೋಟೇಶ್ವರದ ಕುಶಲ ಕರ್ಮಿಗಳು ರಥ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ರಥದ ಮೂರು ಅಚ್ಚುಗಳು ಹಾಗೂ ನಾಲ್ಕು ಮುಖ್ಯ ಗಾಲಿಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ರಥ ನಿರ್ಮಾಣದ ಅಗತ್ಯ ಕಟ್ಟಿಗೆಗಳನ್ನು ಸ್ಥಳೀಯರು ತಮ್ಮ ಹೊಲ, ಭೂಮಿಯಲ್ಲಿ ಬೆಳೆದದ್ದನ್ನೇ ನೀಡಿದ್ದಾರೆ. ಮೂರು ಅಚ್ಚಿಗಾಗಿ ಕರಿ ಮತ್ತಿ ಜಾತಿಯ ಮರ, ಆರು ಚಕ್ರಗಳಿಗಾಗಿ ರಂಜಲು ಜಾತಿಯ ಮರ, ಅಡ್ಡೆಗಳಿಗಾಗಿ ಹೊನ್ನೆ, ಕರಿಮತ್ತಿ, ಹೆಬ್ಬಲಸು ಜಾತಿಯ ಮರಗಳನ್ನು ಭಕ್ತರು ನೀಡಿದ್ದಾರೆ.ರಥದ ಗೊಂಬೆಗಳು ಮತ್ತು ಮಧ್ಯ ಭಾಗದ ಕೆತ್ತನೆಗಳಿಗಾಗಿ ಸಾಗವಾನಿ, ದೇವರನ್ನು ಕೂರಿಸುವ ಪೀಠ ಸ್ಥಾಪನೆಗೆ ಹಲಸಿನ ಮರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟೂ ಮೂರು ಸಾವಿರ ಸಿಎಪ್ ಟಿ ನಾಟಾ ಬೇಕಾಗಲಿದೆ ಎಂದರು.
ಉಪಾಧ್ಯಕ್ಷ ದ್ಯಾಮಣ್ಣ ದೊಡ್ಮನಿ ಮಾತನಾಡಿ, ರಥ ನಿರ್ಮಾಣಕ್ಕೆ 3 ಕೋಟಿ ಬೇಕಾಗಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಿದ್ದೆವು. ಆದರೆ, ಸ್ಥಳೀಯರು ಕೃಷಿಕರೇ ಅಧಿಕ ಪ್ರಮಾಣದಲ್ಲಿದ್ದುದರಿಂದ ಇಷ್ಟೊಂದು ಮೊತ್ತದ ಹಣ ಹೊಂದಿಸುವುದು ಕಷ್ಟವಾಗಿತ್ತು. ಪ್ರತಿ ಗ್ರಾಮಕ್ಕೆ ತೆರಳಿ ಪ್ರತಿಯೊಬ್ಬರಿಂದ 10 ರೂ. ದೇಣಿಗೆ ಕಾನ್ಸೆಪ್ಟ್ ನೊಂದಿಗೆ ನಾವು ಕಾರ್ಯ ನಿರ್ವಹಿಸಿದ್ದೇವೆ. ರಥ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಅವಕಾಶ ಇಲ್ಲದಿದ್ದರೂ, ಈ ಹಿಂದೆ ದೇಣಿಗೆ ನೀಡಿದ್ದ ದಾಖಲೆಗಳನ್ನು ಶಾಸಕ ಶಿವರಾಮ ಹೆಬ್ಬಾರ್ ತೆಗೆಸಿ ಮುಖ್ಯಮಂತ್ರಿಗಳ ಮಟ್ಟದಲ್ಲಿ ಪ್ರಯತ್ನಿಸಿ 3 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಇದರ ಜೊತೆ ಸಾರ್ವಜನಿಕರಿಂದ 95 ಲಕ್ಷ ರೂ. ನಷ್ಟು ಸಂಗ್ರಹವಾಗಿದೆ. ಈ ಎಲ್ಲ ಹಣವನ್ನು ಬಳಕೆ ಮಾಡಿಕೊಂಡು ಮಾರ್ಚ್ ವೇಳೆಗೆ ರಥ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೆ ನಿರ್ಧರಿಸಿದ್ದೇವೆ ಎಂದರು.
ಹಳೇ ರಥದ ಸ್ವಚ್ಚತಾ ಕಾರ್ಯ
1608 ರಲ್ಲಿ ಸೋಂದಾ ರಾಮಚಂದ್ರ ನಾಯಕ ಈ ರಥವನ್ನು ಸಿದ್ಧಪಡಿಸಿ ದೇವಾಲಯಕ್ಕೆ ನೀಡಿದ್ದರು. 413 ವರ್ಷಗಳಷ್ಟು ಹಳೆಯದಾದ ಈ ರಥಕ್ಕೆ ಪ್ರತಿ ವರ್ಷವೂ ಹೊನ್ನೆ ಎಣ್ಣೆಯ ಲೇಪನದಿಂದಾಗಿ ರಥದ ಮೂಲ ಸ್ವರೂಪವೇ ಕಾಣದ ಸ್ಥಿತಿ ಉಂಟಾಗಿದೆ. ಇಲ್ಲಿಯ ಕೆತ್ತನೆಗಳು ಏನಿವೆ ಎಂಬುದೂ ಕಾಣದಂತಾಗಿದೆ.
ಈಗ ಈ ರಥಕ್ಕೆ ಅಂಟಿದ್ದ ಲೇಪನಗಳನ್ನು ಬಿಸಿ ಗಾಳಿ ಬಿಟ್ಟು, ಎಣ್ಣೆ ಕರಗಿಸಿ, ಒರೆಸಬೇಕಾಗಿದೆ. ಈ ಕಾರ್ಯಕ್ಕಾಗಿ ಮೂರು ತಿಂಗಳ ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸ್ವಚ್ಛತಾ ಕಾರ್ಯಕ್ಕೇ 5 ಲಕ್ಷ ಖರ್ಚಾಗಲಿದೆ. ಪ್ರತಿ ದಿನ 8 ಕ್ಕೂ ಅಧಿಕ ಜನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಂಪೂರ್ಣ ಸ್ವಚ್ಛಗೊಳಿಸಿದ ಬಳಿಕ ರಥದಲ್ಲಿರುವ ಕೆತ್ತನೆಗಳನ್ನು ಅಧ್ಯಯನ ಮಾಡಿ, ನೂತನ ರಥದಲ್ಲಿ ಮತ್ತೆ ಕೆತ್ತನೆ ಮಾಡಲಾಗುತ್ತದೆ. ಆ ಬಳಿಕ ಹಳೆಯ ರಥಕ್ಕಾಗಿ ಪ್ರತ್ಯೇಕ ಶೆಡ್ ನಿರ್ಮಿಸಿ ಸಂಗ್ರಹಿಸಿಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಈ ವೇಳೆ ದೇವಾಲಯ ಅಧ್ಯಕ್ಷ ರಾಜಶೇಖರ ಒಡೆಯರ್, ಶಿವಕುಮಾರ ದೇಸಾಯಿ ಗೌಡ, ಪ್ರಕಾಶ ಬಂಗ್ಲೆ, ದಯಾನಂದ ಮರಾಠೆ, ರಾಜು ತಳವಾರ ಹಾಗೂ ಇತರರಿದ್ದರು.