ಬೆಂಗಳೂರು: ರಾತ್ರಿಯಾದರೆ ಸಾಕು ಡಕಾಯಿತರಂತೆ ಕಾಣುವ ಕೆಲ ಡ್ರೈವರ್‌ಗಳ ಆಟೋ ಹತ್ತಲು ಭಯ ಪಡುವ ಸ್ಥಿತಿ ನಿರ್ಮಾಣ ಆಗಿದೆ. ಬೆಂಗಳೂರಿನಲ್ಲಿ ಸುಲಿಗೆ ಪ್ರಕರಣವೊಂದು ನಡೆದಿದ್ದು, ಅಲರ್ಟ್ ಆದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರ ಪೊಲೀಸರು ಶಿವಕುಮಾರ್ ಹಾಗು ಮಂಟ್ಯಪ್ಪ ಎಂಬ ಖದೀಮರನ್ನು ಬಂಧನ ಮಾಡಿದ್ದಾರೆ. ರಾತ್ರಿಯಾದರೆ ರಸ್ತೆಗಿಳಿಯುವ ಇವರು ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.
ಗೋವಿಂದರಾಜನಗರದ ಎಂಸಿ ಲೇಔಟ್‌ನಲ್ಲಿರುವ ಕ್ಯೂಟಿಸ್ ಆಸ್ಪತ್ರೆ ಬಳಿ ಈ ಕೃತ್ಯ ನಡೆದಿದೆ. ವಕೀಲರಾದ ರಾಮಕೃಷ್ಣಯ್ಯ ಅವರು ಹೊರಜಿಲ್ಲೆಯಲ್ಲಿ ಕೇಸ್‌ವೊಂದನ್ನು ಮುಗಿಸಿ ವಾಪಾಸ್ ನಗರಕ್ಕೆ ಬಂದು ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಆಟೋದಲ್ಲಿ ಬಂದವರೇ ಶಿವಕುಮಾರ್ ಹಾಗು ಮಂಟ್ಯಪ್ಪ. ವಕೀಲರನ್ನು ಆಟೋಗೆ ಹತ್ತಿಸಿಕೊಂಡ ಮೇಲೆ ಆರೋಪಿಗಳ ಅಸಲಿ ಆಟ ಶುರುವಾಗಿತ್ತು.
ಆರೋಪಿ ಶಿವಕುಮಾರ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ನಂದಿನಿ ಲೇಔಟ್‌ನಲ್ಲಿರುವ ವ್ಯಕ್ತಿಯೊಬ್ಬರಿಂದ ಆಟೋವನ್ನು ಬಾಡಿಗೆ ಪಡೆದು ಓಡಿಸುತ್ತಿದ್ದ. ನಿಯತ್ತಾಗಿ ದುಡಿಯುತ್ತಿದ್ದವನಿಗೆ ಹಣದಾಸೆ ಶುರುವಾಗಿತ್ತು. ಇದಕ್ಕೆ ಸಾಥ್ ಕೊಟ್ಟಿದ್ದು ಆತನ ಸ್ನೇಹಿತ ಮಂಟ್ಯಪ್ಪ. ವಕೀಲ ರಾಮಕೃಷ್ಣಯ್ಯರನ್ನು ಪಿಕ್ ಆಪ್ ಮಾಡಿ ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಮತ್ತೊಬ್ಬ ಆರೋಪಿ ಮಂಟ್ಯಪ್ಪ ಆಟೋ ಹತ್ತಿದ್ದ. ಇದನ್ನು ಪ್ರಶ್ನೆ ಮಾಡಿದಾಗ ಏಕಾಏಕಿ ಚಾಕು ತೆಗೆದು ವಕೀಲನ ಕುತ್ತಿಗೆಗೆ ಇಟ್ಟಿದ್ದ.
ಮಧ್ಯರಾತ್ರಿ ಆದ ಕಾರಣ ಯಾರು ಇರದ ರಸ್ತೆಗಳಲ್ಲಿ ಆಟೋವನ್ನು ಸುತ್ತಾಡಿಸಿ ಸುಲಿಗೆಗೆ ಮುಂದಾಗಿದ್ದರು. ಕೊನೆಗೆ ಕ್ಯೂಟೀಸ್ ಆಸ್ಪತ್ರೆ ಬಳಿ ಬಂದು ವಕೀಲರ ಬಳಿ ಇದ್ದ 900 ರೂಪಾಯಿ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು. ಪೊಲೀಸರಿಗೆ ಹೇಳಿದರೆ ಜೈಲಿಗೆ ಹೋಗಿ ವಾಪಾಸ್ ಬಂದು ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದರು. ಈ ವೇಳೆ ಅಸ್ಪಷ್ಟವಾಗಿ ಆಟೋದ ಕೆಲ ನಂಬರ್‌ಗಳನ್ನು ನೋಟ್ ಮಾಡಿದ್ದ ವಕೀಲ ರಾಮಕೃಷ್ಣ ಅದನ್ನು ಪೊಲೀಸರಿಗೆ ತಿಳಿಸಿದ್ದಾರೆ.
ತಕ್ಷಣ ಅಲರ್ಟ್ ಆದ ಪೊಲೀಸರು ರಾತ್ರೋರಾತ್ರಿ ಆ ನಂಬರ್‌ಗಳನ್ನು ನೋಟ್ ಮಾಡಿ ಆಟೋವಿನ ಗುರುತಿನ ಮಾಹಿತಿ ಪಡೆದು ಆಟೋ ಸ್ಟ್ಯಾಂಡ್‌ಗಳಲ್ಲಿ ವಿಚಾರಣೆ ನಡೆಸಿದ್ದಾರೆ. ನಂತರ ಕೆಲ ಆಟೋ ನಂಬರ್‌ಗಳನ್ನು ಕಲೆ ಹಾಕಿದ್ದ ಹಿನ್ನೆಲೆಯಲ್ಲಿ ಒಂದಷ್ಟು ಆಟೋ ಮಾಲೀಕರನ್ನು ಸಂಪರ್ಕ ಮಾಡಿದಾಗ ನಂದಿನಿ ಲೇಔಟ್ ವಿಳಾಸ ಸಿಕ್ಕಿತ್ತು. ಅಲ್ಲಿ ವಿಚಾರಿಸಿದಾಗ ಆ ಆಟೋ ಶಿವಕುಮಾರ್ ಎಂಬಾತನಿಗೆ ಬಾಡಿಗೆ ನೀಡಲಾಗಿತ್ತು. ಈ ನಂಬರ್ ಅನ್ನು ಟ್ರಾಕ್ ಮಾಡಿದಾಗ ಆ ನಂಬರ್ ಟ್ರಾವೆಲ್ ಮಾಡಿದ್ದ ಮತ್ತೊಂದು ಕೃತ್ಯಕ್ಕೆ ಸ್ಕೆಚ್ ಹಾಕುತ್ತಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಪೊಲೀಸರು ಆಟೋವನ್ನು ಬೆನ್ನತ್ತಿ ಆರೋಪಿಗಳನ್ನು ವಿಚಾರಿಸಿದಾಗ ಅಸಲಿ ಸಂಗತಿ ಹೊರ ಬಿದ್ದಿದೆ. ದೂರು ದಾಖಲಾದ ಎರಡೇ ಗಂಟೆಗಳಲ್ಲಿ ಈ ಪ್ರಕರಣ ಬಯಲಿಗೆ ಬಂದಿದೆ. ಇನ್ನು ಎರಡು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ 500 ರೂಪಾಯಿ ರಿಕವರಿ ಮಾಡಿದ್ದಾರೆ. ಸದ್ಯ ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.