ಕಲಬುರಗಿ, ಸೆಪ್ಟೆಂಬರ್ 21: ಕಳೆದ ಶುಕ್ರವಾರ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ಗ್ರಾಮ ಪಂಚಾಯಿತು ಮಾಜಿ ಸದಸ್ಯ ವಿಶ್ವನಾಥ ಜಮಾದಾರ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಲಕ್ಷ್ಮಣ ಗುಂಡೇಟು ತಿಂದ ಆರೋಪಿ. ಅಫಜಲಪುರ ಠಾಣೆ ಪಿಎಸ್ಐ ಸೋಮಲಿಂಗ ಒಡೆಯರ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿದ್ದ ಆರೋಪಿ ಲಕ್ಷ್ಮಣನನ್ನು ಬಂಧಿಸಲು ಹೋಗಿದ್ದಾರೆ. ಈ ವೇಳೆ ಆರೋಪಿ ಲಕ್ಷ್ಮಣ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದನು. ಆತ್ಮರಕ್ಷಣೆಗಾಗಿ ಅಫಜಲಪುರ ಠಾಣೆ ಪಿಎಸ್ಐ ಸೋಮಲಿಂಗ ಆರೋಪಿ ಲಕ್ಷ್ಮಣ ಬಲಗಾಲಿಗೆ ಗುಂಡು ಹೊಡೆದಿದ್ದಾರೆ.
ಆರೋಪಿ ಲಕ್ಷ್ಮಣ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಯ ವಿವಿಧಡೆ ಬಂದೂಕು ಸರಬರಾಜು ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಅಕ್ರಮ ಶಸ್ತ್ರಾಸ್ತ ಪೂರೈಕೆ ಸೇರಿದಂತೆ ಕೊಲೆ ಆರೋಪಿ ಲಕ್ಷ್ಮಣ ಪೂಜಾರಿ ವಿರುದ್ಧ 11 ಕೇಸ್ಗಳಿವೆ. ವಿಶ್ವನಾಥ್ ಜಮಾದಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲಕ್ಷ್ಮಣ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾ.ಪಂ ಮಾಜಿ ಸದಸ್ಯ ವಿಶ್ವನಾಥ ಜಮಾದಾರ್ ಕೊಲೆ
ವಿಶ್ವನಾಥ್ ಜಮಾದಾರ್ ಕಳೆದ ಶುಕ್ರವಾರ ಬೆಳಿಗ್ಗೆ ಮಗನನ್ನು ಶಾಲೆಗೆ ಬಿಟ್ಟು ಬರುತ್ತೇನೆ ಅಂತ ಬೈಕ್ ಮೇಲೆ ಹೋಗಿದ್ದರು. ಮಗನನ್ನು ಶಾಲೆಗೆ ಬಿಟ್ಟು ಜಿಡಗಾ ಕ್ರಾಸ್ ಬಳಿ ಬೈಕ್ ಮೇಲೆ ಬರುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ವಿಶ್ವನಾಥ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದರು.
ವಿಶ್ವನಾಥ್ ಅವರ ತೆಲೆಗೆ ಮೂರು ಗುಂಡು ಹೊಡೆದಿದ್ದರು. ಪರಿಣಾಮ ತೀವ್ರ ರಕ್ತಸ್ರಾವವಾಗಿ ವಿಶ್ವನಾಥ್ ಸ್ಥಳದಲ್ಲೇ ಮೃತಪಟ್ಟಿದ್ದರು. ನಿರ್ಜನ ಪ್ರದೇಶದಲ್ಲಿ ವಿಶ್ವನಾಥ್ ಅವರನ್ನು ಕೊಂದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ವಿಶ್ವಾನಾಥ್ ಮೃತದೇಹ ಕಂಡ ದಾರಿಹೋಕರು ಪೊಲೀಸರಿಗೆ ವಿಚಾರ ತಿಳಿಸಿದ್ದರು. ಕೂಡಲೇ ಆಳಂದ ಪೊಲೀಸರು ಸ್ಥಳಕ್ಕೆ ಬಂದು, ಮಾಹಿತಿ ಕಲೆ ಹಾಕಿದರು.
ಆಳಂದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಕೊಲೆ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.