ಬೆಂಗಳೂರು, ಸೆಪ್ಟೆಂಬರ್ 20: ಬೆಂಗಳೂರು ನಗರ ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಗುರುವಾರ ಬೆಂಗಳೂರಿನ ಶಾಂತಿನಗರದ ಜೋಡಿ ರಸ್ತೆಯಲ್ಲಿ ಕೆಎ 51 AJ 6905 ನಂಬರ್ನ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ.
ಎದೆ ನೋವಿನಿಂದ ಬಳಲುತ್ತಿದ್ದ ಚಾಲಕ ವೀರೇಶ್ ಕೂತ ಜಾಗದಲ್ಲೇ ಒಂದು ಕಡೆ ವಾಲಿದ್ದಾರೆ. ಹೀಗಾಗಿ ಬಸ್ ನಿಧಾನವಾಗಿ ಚಲಿಸುತ್ತಿತ್ತು. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಹಲಸೂರು ಸಂಚಾರಿ ಠಾಣೆ ಎಎಸ್ಐ ಆರ್.ರಘುಕುಮಾರ್ ಅನುಮಾನಗೊಂಡು ಬಸ್ ಬಳಿ ಬಂದು ನೋಡಿದಾಗ, ಚಾಲಕ ವಿರೇಶ್ ಒಂದು ಕಡೆ ವಾಲಿದ್ದನ್ನು ಕಂಡಿದ್ದಾರೆ. ತಕ್ಷಣ ಸಿನಿಮೀಯ ರೀತಿ ಚಲಿಸುತ್ತಿದ್ದ ಬಸ್ ಹತ್ತಿದ್ದಾರೆ. ನಂತರ ಹ್ಯಾಂಡ್ ಬ್ರೇಕ್ ಹಾಕಿ ಬಸ್ನ್ನು ನಿಲ್ಲಿಸಿದ್ದಾರೆ.
ಬಳಿಕ, ಆ್ಯಂಬುಲೆನ್ಸ್ಗೂ ಕಾಯದೆ ಅಶೋಕ ನಗರ ಟ್ರಾಫಿಕ್ ಪೊಲೀಸ್ ಪ್ರಸನ್ನ ಕುಮಾರ್ ಅವರ ಸಹಾಯದಿಂದ ಚಾಲಕ ವೀರೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಮತ್ತು ಚಾಲಕ ವಿರೇಶ್ ಅವರ ಪ್ರಾಣ ಉಳಿದಿದೆ.