ನಿತೀಶ್ ಸಂಪುಟಕ್ಕೆ 31 ಸಚಿವರು ಸೇರ್ಪಡೆ: ಪ್ರಮುಖ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಸಿಎಂ: ಯಾರಿಗೆ ಯಾವ ಖಾತೆ ಇಲ್ಲಿದೆ ವಿವರ

ಬಿಹಾರ: ಎನ್ ಡಿ ಎ ಮೈತ್ರಿ ಕೂಟದಿಂದ ಮುನಿಸಿಕೊಂಡು ಹೊರಬಂದ ನಿತೀಶ್ ಕುಮಾರ್ ಹಳೆ ದೋಸ್ತಿ ಆರ್ ಜೆ ಡಿ ಜೊತೆ ಸೇರಿ ಸರ್ಕಾರ ರಚಿಸಿದ್ದಾಗಿದೆ. ನಿತೀಶ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ 31 ಸಚಿವರು ಪ್ರಮಾಣ ವಚನ ಸ್ವೀಕರಿಸಿ ಸಂಪುಟ ಸೇರ್ಪಡೆಗೊಂಡಿದ್ದಾರೆ.

ಸಂಪುಟ ವಿಸ್ತರಣೆ ಬೆನ್ನಲ್ಲೇ ನಿತೀಶ್ ಕುಮಾರ್ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆ, ಸಾಮಾನ್ಯ ಆಡಳಿತ, ಕ್ಯಾಬಿನೆಟ್ ಸೆಕ್ರೆಟರಿಯೇಟ್, ಹಾಗೂ ಇತರ ಖಾತೆಗಳನ್ನು ಬೇರೆಯವರಿಗೆ ನೀಡದೇ ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಆರ್‌ಜೆಡಿಯಿಂದ 16 ಮಂದಿಗೆ ಸಚಿವ ಸ್ಥಾನ, ಜೆಡಿಯುನಿಂದ 11 ಮಂದಿಗೆ ಸಚಿವ ಸ್ಥಾನ, ಇಬ್ಬರು ಕಾಂಗ್ರೆಸ್ ಶಾಸಕರು, ಹಿಂದೂಸ್ತಾನಿ ಅವಾಮ್ ಮೋರ್ಚಾದ ಒಬ್ಬರು ಮತ್ತು ಏಕೈಕ ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇನ್ನು ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು ಆರೋಗ್ಯ, ರಸ್ತೆ ನಿರ್ಮಾಣ, ನಗರ ವಸತಿ ಮತ್ತು ಅಭಿವೃದ್ಧಿ, ಗ್ರಾಮೀಣ ಕಾಮಗಾರಿಗಳಂತಹ ಪ್ರಮುಖ ಖಾತೆಗಳನ್ನು ಪಡೆದುಕೊಂಡಿದ್ದಾರೆ.

ತೇಜಸ್ವಿ ಯಾದವ್ ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಅವರಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ನೀಡಲಾಗಿದೆ.

ವಿಜಯ್ ಕುಮಾರ್ ಚೌಧರಿ ಅವರಿಗೆ ಹಣಕಾಸು, ವಾಣಿಜ್ಯ ತೆರಿಗೆ ಮತ್ತು ಸಂಸದೀಯ ವ್ಯವಹಾರಗಳ ಖಾತೆ, ಬಿಜೇಂದ್ರ ಯಾದವ್ ಅವರಿಗೆ ವಿದ್ಯುತ್, ಯೋಜನೆ ಮತ್ತು ಅಭಿವೃದ್ಧಿ ಖಾತೆಗಳನ್ನು ಪಡೆದಿದ್ದಾರೆ.

ಇಂದು ಬೆಳಗ್ಗೆ ಪ್ರಮುಖ ಮಿತ್ರ ಪಕ್ಷವಾದ ಆರ್‌ಜೆಡಿಯ 16 ಶಾಸಕರು, ಜೆಡಿ(ಯು)ದಿಂದ 11, ಕಾಂಗ್ರೆಸ್‌ನಿಂದ ಇಬ್ಬರು, ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಒಬ್ಬ ಪಕ್ಷೇತರು ಸೇರಿದಂತೆ 31 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.