ಅಕ್ರಮ ಮದ್ಯ ಸಾಗಾಟ: ಕಾರ್ಯಾಚರಣೆ ನಡೆಸಿ ಲಕ್ಷಾಂತರ ಬೆಲೆಯ ಸ್ವತ್ತು ವಶಕ್ಕೆ ಪಡೆದ ಅಭಕಾರಿ ಅಧಿಕಾರಿಗಳು.!

ಕಾರವಾರ: ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ಭಾನುವಾರ ಅಬಕಾರಿ ಅಧಿಕಾರಿಗಳು ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಕಾರು ಹಾಗೂ ಲಾರಿಯನ್ನು ತಡೆದು ಲಕ್ಷಾಂತರ ರೂ. ಮೌಲ್ಯದ ಮದ್ಯ, ವಾಹನ ಹಾಗೂ ಕ್ಲೋರಿಂಗ್ ಸಿಲಿಂಡರ್ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಕಾರೊಂದನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಪತ್ತೆಯಾಗಿದ್ದು ಆರೋಪಿ ಚಾಲಕ ಗೋವಾ ಕಾಣಕೋಣದ ಪ್ರಸಾದ ಲಿಂಗು ನಾಯ್ಕನನ್ನು ಬಂಧಿಸಿ 2 ಲಕ್ಷ ರೂ. ಮೌಲ್ಯದ ಕಾರು ಹಾಗೂ 78,450 ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಖಾಲಿ ಕ್ಲೋರಿಂಗ್ ಸಿಲಿಂಡರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಲಾರಿಯಲ್ಲಿ ಅಕ್ರಮ ಗೋವಾ ಮದ್ಯ ಹಾಗೂ 5 ಲೀ. ಬಿಯರ್ ಪತ್ತೆಯಾಗಿದೆ. ಚಾಲಕ ಬೆಳಗಾವಿ ನಾಗಪ್ಪ ಶಿವಬಸು ಕಾಂಬಳೆ ಎಂಬಾತನನ್ನು ಬಂಧಿಸಿ ಸುಮಾರು 90 ಸಾವಿರ ರೂ. ಮೌಲ್ಯದ ಮದ್ಯ, 30 ಲಕ್ಷ ರೂ. ಮೌಲ್ಯದ ಲಾರಿ ಹಾಗೂ ಲಾರಿಯಲ್ಲಿದ್ದ 8 ಲಕ್ಷ ರೂ. ಮೌಲ್ಯದ 10 ಖಾಲಿ ಕ್ಲೋರಿಂಗ್ ಸಿಲಿಂಡರುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿದಿದೆ.
ಜಿಲ್ಲಾ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ. ನಿರ್ದೇಶನದಲ್ಲಿ, ಕಾರವಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಬಸವರಾಜ ಕರವಿನಕೋಪ್ಪ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ದಯಾನಂದ, ಅಬಕಾರಿ ಉಪ ನಿರೀಕ್ಷಕ ಎಂ. ಎಂ. ನಾಯ್ಕ ಸಿಬ್ಬಂದಿಗಳಾದ ಎನ್. ಜಿ. ಜೋಗಳೆಕರ, ಸುರೇಶ ಹಾರೂಗೋಪ್ಪ, ರಂಜನಾ ನಾಯ್ಕ, ನಾಗರಾಜ, ಎ. ಎಸ್. ಪೊಂಡೇಕರ ಹಾಗೂ ಎನ್. ಎನ್. ಖಾನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.