ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ‘ಅಮೃತ ಸಂಭ್ರಮ ಜಾತಾ’

ಹೊನ್ನಾವರ: ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಹೊನ್ನಾವರ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ ಸಂಯುಕ್ತ ಆಶ್ರಯದಲ್ಲಿ ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ‘ಅಮೃತ ಸಂಭ್ರಮ ಜಾತಾ’ ಭಾನುವಾರ ನಡೆಯಿತು.

ಪಟ್ಟಣದ ಗೇರುಸೊಪ್ಪಾ ವೃತ್ತದಿಂದ ಶರಾವತಿ ವೃತ್ತದವರೆಗೆ ಜಾತಾ ನಡೆಯಿತು. ಜಾತಾ ಉದ್ದೇಶಿಸಿ ರಾಷ್ಟಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಜೆ ಕೈರನ್ ಮಾತನಾಡಿ, ನಮ್ಮ ರಾಷ್ಟ್ರ ಬಾವುಟ ಕೇವಲ ಮೂರು ಬಣ್ಣದ ಬಟ್ಟೆಯ ಬಾವುಟವಲ್ಲ. ಮೇಲಿರುವ ಕೇಸರಿ ತ್ಯಾಗದ ಸಂಕೇತ. ಮಧ್ಯದಲ್ಲಿರುವ ಬಿಳಿ ಪರಿಶುದ್ಧ ಜೀವನಕ್ಕೆ ನಾಂದಿ ಹಾಡುವಂತ ಸಂದೇಶವನ್ನ ನೀಡುತ್ತದೆ. ಹಸಿರು ಬಣ್ಣ ಪ್ರಗತಿಯ ಸಂಕೇತ. ಮದ್ಯದಲ್ಲಿರುವ ಅಶೋಕ ಚಕ್ರದಲ್ಲಿನ 24 ಗೆರೆಗಳು ಪ್ರತಿಯೊಬ್ಬ ಮನುಷ್ಯನು ದಿನದ 24 ತಾಸು ಸತತವಾಗಿ ಪ್ರಾಮಾಣಿಕವಾಗಿ ದೇಶ ಪ್ರೇಮಿಯಾಗಿ ಶ್ರಮ ಪಡಬೇಕು ಎನ್ನುವುದನ್ನು ಸೂಚಿಸುತ್ತದೆ ಎಂದರು.

ಈ ದೇಶಕ್ಕಾಗಿ ಹುತಾತ್ಮರಾದ ಲಕ್ಷಾಂತರ ಸೈನಿಕರನ್ನ ಈ ವೇಳೆ ನಾವು ನೆನೆಸಿಕೊಳ್ಳಬೇಕು. ಒಂದು ದೇಶ ಪ್ರಗತಿಯಾಗಬೇಕಾದರೆ ಮೂರೂ ಅಂಶ ಬಹಳ ಮುಖ್ಯ. ಶಿಕ್ಷಣ, ಕೃಷಿ ಮತ್ತು ಸೈನ್ಯ. ಈ ಮೂರು ವಿಷಯದ ಮೇಲೆ ಒಬ್ಬ ಮನುಷ್ಯ ಕೇಂದ್ರೀಕರಿಸಿದರೆ, ದೇಶ ತನ್ನಿಂದ ತಾನೇ ಸಮೃದ್ಧಿಯಾಗುತ್ತದೆ. ನಮ್ಮ ದೇಶಕ್ಕಾಗಿ ಹೋರಾಟ ಮಾಡಿದವರನ್ನು ಇವತ್ತು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ,ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ ವರ್ಗಿಸ್, ಉಪಾಧ್ಯಕ್ಷ ಎಮ್ ಜಿ ನಾಯ್ಕ, ಕಾರ್ಯದರ್ಶಿ ರಾಜೇಶ್ ಸಾಳೆ ಹಿತ್ತಲ್, ಖಜಾಂಚಿ ರೋಶನ್ ಶೇಟ್, ಲಯನ್ ಮಹೇಶ್ ನಾಯ್ಕ, ಲಿಯೋ ಕ್ಲಬ್ ಅಧ್ಯಕ್ಷೆ ಧನ್ಯಾ ಭಟ್, ಸಂದೇಶ್ ನಾಯ್ಕ ಮತ್ತಿತರು ಭಾಗವಹಿಸಿದ್ದರು.