ಬೆಂಗಳೂರು : ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ನಿನ್ನೆ ರಾತ್ರಿವರೆಗೂ ಪಕ್ಷದ ಸಂಪರ್ಕದಲ್ಲಿದ್ದರು. ಯಾವ ಕಾರಣಕ್ಕೂ ತಾಯಿಗೆ ದ್ರೋಹ ಮಾಡಲ್ಲ ಎಂದು ಹೇಳಿದ್ದರು. ಆದರೆ, ಮಾಡಿದ್ದೇನು? ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್ ಹೇಳಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಅಡ್ಡ ಮತದಾನ ಮಾಡಿದ ಸೋಮಶೇಖರ್ ಮತ್ತು ಮತದಾನಕ್ಕೇ ಬಾರದ ಶಿವರಾಮ ಹೆಬ್ಬಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ʻʻಬಿಜೆಪಿ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ ಮತ ಹಾಕುವಂತೆ 47 ಬಿಜೆಪಿ ಶಾಸಕರಿಗೆ ವಿಪ್ ಕೊಟ್ಟಿದ್ದೆವು. ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್‌ಗೂ ವಿಪ್ ಕಳಿಸಿದ್ದೆವು. ಸೋಮಶೇಖರ್ ಅವರ ಮನೆಗೇ ವಿಪ್ ಜಾರಿ ಮಾಡಲಾಗಿತ್ತು. ಶಿವರಾಮ ಹೆಬ್ಬಾರ್ ಅವರ ಶಾಸಕರ ಭವನದ ಕೊಠಡಿಗೇ ವಿಪ್ ಕಳುಹಿಸಲಾಗಿತ್ತುʼʼ ಎಂದು ಅಶೋಕ್ ವಿವರಿಸಿದರು.
ʻʻಕಳೆದ ವಾರದಿಂದ ಸೋಮಶೇಖರ್, ಹೆಬ್ಬಾರ್ ಮಾತನಾಡುತ್ತಿದ್ದರು. ಹೆಬ್ಬಾರ್ ಅವರಂತೂ ಕೊನೆ ಕ್ಷಣದ ವರೆಗೂ ಮಾತಾಡಿದ್ರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದ್ರು. ತಾಯಿಗೆ ಮೋಸ ಮಾಡಲ್ಲ ಅಂದಿದ್ರು. ಆದರೆ, ಈಗ ಮೋಸ ಮಾಡಿದ್ದಾರೆʼʼ ಎಂದು ಅವರು ಹೇಳಿದರು.
ʻಸೋಮಶೇಖರ್ ಅಡ್ಡ ಮತದಾನ ಮಾಡಿದಾರೆ ಅಂತ ಗೊತ್ತಾಗಿದೆ. ಈ ರೀತಿ ಪದೇಪದೆ ಮೋಸ ಮಾಡೋದನ್ನು ಜನರು ಸಹಿಸಲ್ಲʼʼ ಎಂದು ಹೇಳಿದ ಅಶೋಕ್, ಸೋಮಶೇಖರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ ಎಂದು ವಿವರಣೆ ನೀಡಿದರು.
ಸೋಮಶೇಖರ್ ಅವರನ್ನು ಮಂತ್ರಿ ಮಾಡಿದೆವು. ಮೈಸೂರು ಇನ್ ಚಾರ್ಜ್ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತ ಈಗ ಹೇಳುತ್ತಾರೆ. ಅವರಿಗೆ ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ.ʼʼ ಎಂದು ಪ್ರಶ್ನಿಸಿದರು ಆರ್. ಅಶೋಕ್.
ʻಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿದರು. ದ್ರೋಹ ಬಗೆಯಲ್ಲ ಅಂತ ಹೇಳಿದರು. ಅವರು ಸಿಎಂ ಸಿದ್ದರಾಮಯ್ಯ ಅವರ ಜತೆ ಓಡಾಟ ಶುರು ಮಾಡಿದಾಗಿನಿಂದಲೇ ನಮಗೆ ಗುಮಾನಿ ಇತ್ತು. ಆದರೂ ಅವರನ್ನು ನಂಬಿದ್ದೆವು. ಇವತ್ತು ಅವರು ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೂ ಜನ ಅವರನ್ನು ಕ್ಷಮಿಸುವುದಿಲ್ಲʼʼ ಎಂದು ಹೇಳಿದರು ಅಶೋಕ್.
ಈ ರೀತಿ ಪಕ್ಷ ದ್ರೋಹ ಮಾಡಿರುವ ಇಬ್ಬರು ನಾಯಕರ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ನಮ್ಮ ಶಾಸಕರಾಗಿರುವ ವಿವೇಕ್ ರೆಡ್ಡಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಏನೆಲ್ಲಾ ಮಾಡಬಹುದು ಅನ್ನೋದು ತಿಳಿಸಿದ್ದಾರೆ ಎಂದು ಹೇಳಿದರು.
ಎಸ್.ಟಿ ಸೋಮಶೇಖರ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸಾಧ್ಯತೆಗಳ ಬಗ್ಗೆ ಕೇಳಿದಾಗ, ಜಗದೀಶ್ ಶೆಟ್ಟರ್ ಅವರು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರು. ಇವರು ಕೂಡಾ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು ಎಂದರು.
ಇದೇ ವೇಳೆ ಐದನೇ ಅಭ್ಯರ್ಥಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧೆ ಆಗಬೇಕು ಅನ್ನೋ ದೃಷ್ಟಿಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೇವೆ. ಚುನಾವಣೆ ಅಂದ ಮೇಲೆ ಸೋಲು, ಗೆಲುವು ಇದ್ದೇ ಇದೆ. ಇದು ಬಿಜೆಪಿ, ಜೆಡಿಎಸ್ ಸೋಲು ಅಂತ ಅಲ್ಲ.ʼʼ ಎಂದರು ಅಶೋಕ್.