ಬೆಂಗಳೂರು: ಬೇರೆ ಬೇರೆ ಕಡೆ ಗೆದ್ದಾಗ, ಚುನಾವಣಾ ಆಯೋಗ ಸರಿಯಿದೆ. ಸೋತಾಗ ಸರಿಯಿಲ್ಲ ಅಂತಾರೆ. ಆದರೆ ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದರು.
ಭಾರೀ ಹೈಡ್ರಾಮಾದ ಬಳಿಕ ಜಯನಗರ ಗೊಂದಲಕ್ಕೆ ತೆರೆ ಬಿದ್ದಿದೆ. ಜಯನಗ ದಲ್ಲಿ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಮೋಸ ಮಾಡಿ ಗೆದ್ದಿದ್ದಾರೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯನೇ ನೇರ ಕಾರಣ ಎಂಬ ರಾಮಲಿಂಗರೆಡ್ಡಿ ಆರೋಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ತೇಜಸ್ವಿ ಸೂರ್ಯ ತಿರುಗೇಟು ನೀಡಿದರು.
ನಮ್ಮ ಅಭ್ಯರ್ಥಿ ಕರೆ ಮಾಡಿದ ಮೇಲೆ ಅಲ್ಲಿಗೆ ಹೋಗಿದ್ದೆವು. ನಾವು ಹೋಗುವುದಕ್ಕಿಂತ ಮುಂಚೆ ರಾಮಲಿಂಗಾರೆಡ್ಡಿ ಅವ್ರು ಹೋಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಅಂತ ಚುನಾವಣಾ ಅಧಿಕಾರಿಗಳು ಘೋಷಣೆನೆ ಮಾಡಿರಲಿಲ್ಲ. ಆಗ್ಲೇ ಗೆದ್ರು ಅಂತ ಅವರು ಸಂಭ್ರಮ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.
ತಪ್ಪಾಗಿರೋ, ಅಸಿಂಧುಗೊಂಡಿರೋ ಮತಗಳನ್ನ ಪರಿಶೀಲನೆ ಆಗಿದೆ. ಆಗ 16 ಮತಗಳ ಅಂತರದ ಮುನ್ನಡೆಯಲ್ಲಿ ನಮ್ಮ ಅಭ್ಯರ್ಥಿ ಇದ್ದರು. ರಾಮಲಿಂಗರೆಡ್ಡಿ, ಅವ್ರ ಮಗ, ಅವ್ರ ಬೆಂಬಲಿಗರು ಫಲಿತಾಂಶ ಘೋಷಣೆ ಮಾಡಬೇಡಿ ಅಂತ ದಬಾಯಿಸಿದರು. ಆದರೆ ನಾವು ಮರು ಮತ ಎಣಿಕೆಯಲ್ಲಿ 16 ಮತಗಳ ಅಂತರದಿಂದ ಗೆದ್ದಿದ್ದೇವೆ. ಆದರೆ ಅನೌನ್ಸ್ ಮಾಡೋಕೆ ಬಿಡ್ತಿಲ್ಲ ಅಂತ ನಮ್ ಅಭ್ಯರ್ಥಿಗಳು ಕರೆ ಮಾಡಿದ್ದರು ಎಂದು ಹೇಳಿದರು.