ಬೆಂಗಳೂರು: ಬಿಜೆಪಿಯಲ್ಲಿರುವ ಇಬ್ಬರು ರೆಬೆಲ್ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ನಡೆ ಈಗ ಕುತೂಹಲ ಮೂಡಿಸಿದೆ. ರಾಜ್ಯಸಭಾ ಚುನಾವಣೆಯಲ್ಲಿ ಈಗಾಗಲೇ ಎಸ್‌ಟಿಎಸ್ ಅಡ್ಡ ಮತದಾನ ಮಾಡಿದ್ದಾರೆ. ಹೆಬ್ಬಾರ್ ಇನ್ನೂ ಮತದಾನಕ್ಕೆ ಬಂದಿಲ್ಲ. ಈ ನಡುವೆ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರು ಇಂದು ಬಿಜೆಪಿಗೆ ಗುಡ್‌ಬೈ ಹೇಳುವ ಸಾಧ್ಯತೆ ಇದ್ದು, ಕಾಂಗ್ರೆಸ್ ಸೇರ್ಪಡೆಯಾಗುವ ಮುಖಾಂತರ ಘರ್ ವಾಪ್ಸಿಗೆ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿ ಅತಿ ದೊಡ್ಡ ಬೆಳವಣಿಗೆಯೊಂದು ನಡೆದಿದೆ. ಬಿಜೆಪಿಯಿಂದ ಗೆದ್ದ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿಯ ಚುನಾವಣಾ ಏಜೆಂಟ್ ಆಗಿರುವ ಸುನಿಲ್ ಕುಮಾರ್ ಅವರು ಕೂಡಾ ಇದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಮತ್ತೊಬ್ಬ ರೆಬೆಲ್ ಶಾಸಕ ಶಿವರಾಂ ಹೆಬ್ಬಾರ್ ನಡೆ ಇನ್ನೂ ಗೊತ್ತಾಗಿಲ್ಲ. ಅವರಿನ್ನೂ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.
ಎಸ್‌ಟಿಎಸ್, ಹೆಬ್ಬಾರ್‌ರಿಂದ ಇಂದೇ ರಾಜೀನಾಮೆ?
ಮಂಗಳವಾರ (ಫೆ. 27) ಸಂಜೆ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಸಂಪರ್ಕ ಮಾಡಲಿರುವ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್‌ಗೆ ಘರ್ ವಾಪ್ಸಿ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಉಚ್ಚಾಟನೆ ಕಾಯುತ್ತಾರೋ?
ಈಗಾಗಲೇ ಅಡ್ಡ ಮತದಾನ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ಹೇಳಿದೆ. ಜತೆಗೆ ಈ ನಿಟ್ಟಿನಲ್ಲಿ ಕಾನೂನು ತಜ್ಞರೊಂದಿಗೆ ಚರ್ಚೆಯನ್ನೂ ನಡೆಸುತ್ತಿದೆ. ಇನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದಲ್ಲದೆ ಶಾಸಕತ್ವದಿಂದ ಅನರ್ಹ ಮಾಡುವಂತೆ ಸಹ ಸ್ಪೀಕರ್ ಮೊರೆ ಹೋಗಲು ಬಿಜೆಪಿ ನಿರ್ಧಾರವನ್ನು ಮಾಡಿದೆ. ಒಂದು ವೇಳೆ ಅನರ್ಹ ಮಾಡುವಂತೆ ಮಾಡುವ ಮನವಿಗೆ ಸ್ಪೀಕರ್ ಯು.ಟಿ. ಖಾದರ್ ಸ್ಪಂದಿಸದೇ ಹೋದರೆ, ಕಡತವನ್ನು ಬಾಕಿ ಇಟ್ಟರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗಿದೆ. ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿರುವವರಿಗೆ ಬುದ್ಧಿ ಕಲಿಸಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಆ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸುತ್ತಿದೆ.
ಕಾದು ನೋಡುವ ತಂತ್ರಕ್ಕೆ ಎಸ್.ಟಿ. ಸೋಮಶೇಖರ್ ಮೊರೆ?
ಹೀಗಾಗಿ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿಯ ಮುಂದಿನ ನಡೆ ಬಗ್ಗೆ ಕಾದು ನೋಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಪಕ್ಷದಿಂದ ಉಚ್ಚಾಟನೆ ಮಾಡಿದರೂ ತಮ್ಮ ಶಾಸಕತ್ವಕ್ಕೆ ಯಾವುದೇ ರೀತಿಯಲ್ಲಿ ಅಪಾಯವಾಗದು ಎಂಬ ಹಿನ್ನೆಲೆಯಲ್ಲಿ ಎಸ್‌ಟಿಎಸ್ ಕಾದು ನೋಡುವ ತಂತ್ರವನ್ನು ಸಹ ಅನುಸರಿಸಬಹುದಾಗಿದೆ ಎನ್ನಲಾಗುತ್ತಿದೆ.