ದರ ಏರಿಕೆ ನಡುವೆಯೂ ಕರ್ನಾಟಕದಲ್ಲಿ ಮದ್ಯ ಸೇವನೆ ಹೆಚ್ಚಳ: ರಾಜ್ಯ ಸರ್ಕಾರದ ಹರಿದುಬಂತು ಭರ್ಜರಿ ಆದಾಯ

ಬೆಂಗಳೂರು, (ಡಿಸೆಂಬರ್ 07): ಕರ್ನಾಟಕದಲ್ಲಿ ದರ ಏರಿಕೆಯ ನಡುವೆಯೂ ಮದ್ಯ ಮಾರಾಟ ಜೋರಾಗಿದೆ. ಬಿಯರ್ ಜೊತೆಗೆ ಇತರೆ ಮಾದರಿಯ ಮದ್ಯ ಮಾರಾಟದ ಪ್ರಮಾಣ 0.43 ಶೇ. ಹೆಚ್ಚಳ ವಾಗಿದೆ. 2023ರಲ್ಲಿ ಕೇವಲ ಎಂಟು ತಿಂಗಳಿನಲ್ಲಿ (ಏಪ್ರಿಲ್‌ನಿಂದ ನವೆಂಬರ್‌ ವರೆಗೆ) ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2,500 ಕೋಟಿ ರೂ. ಹೆಚ್ಚುವರಿ ಆದಾಯ ಹರಿದುಬಂದಿದೆ. ಇದರೊಂದಿಗೆ ಗ್ಯಾರಂಟಿಗಳನ್ನು ಸರಿದೂಗಿಸಲು ಹಣಕ್ಕಾಗಿ ಹೆಣಗಾಡುತ್ತಿದ್ದ ಸರ್ಕಾರಕ್ಕೆ ಮದ್ಯಪ್ರಿಯರು ಬೂಸ್ಟ್​ ನೀಡಿದ್ದಾರೆ.

ದರ ಏರಿಕೆ ನಡುವೆಯೂ ಮದ್ಯ ಸೇವನೆ ಹೆಚ್ಚಳ

ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ, ಇದರಿಂದ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆಗೆ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಆದ್ದರಿಂದ ಸರ್ಕಾರ ಪ್ರಮುಖ ಆದಾಯದ ಮೂಲವಾದ ಮದ್ಯದ ದರವನ್ನು ಹೆಚ್ಚಳ ಮಾಡಿ ಮಾರಾಟ ಹೆಚ್ಚಳಕ್ಕೆ ಟಾಸ್ಕ್‌ ನೀಡಿತ್ತು.  ಕಳೆದ ಮೂರು ತಿಂಗಳ ಹಿಂದೆ ಮದ್ಯದ ದರವನ್ನು ಹೆಚ್ಚಳ ಮಾಡಿದ್ದರಿಂದ ಸರ್ಕಾರದ ತೀರ್ಮಾನ ವಿರೋಧಿಸಿದ ಮಧ್ಯಪ್ರಿಯರು ಮದ್ಯ ಸೇವನೆ ಪ್ರಮಾಣವನ್ನು ತಗ್ಗಿಸಿದ್ದರು.

ಆದರೆ, ಈಗ ಚಳಿಗಾಲ ಆರಂಭವಾಗುತ್ತಿದ್ದಂತೆ ದರ ಏರಿಕೆಯನ್ನು ಮರೆತು ಈಗ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಕಳೆದ ವರ್ಷ ದಿನಕ್ಕೆ 80 ಕೋಟಿ ರೂ. ಸರಾಸರಿ ಆದಾಯ ಬರುತ್ತಿತ್ತು.ಈಗ ಒಂದು ದಿನಕ್ಕೆ 90 ಕೋಟಿ ರೂ,ಗೆ ಏರಿಕೆಯಾಗಿದೆ. ಆದರೆ ನವೆಂಬರ್ ತಿಂಗಳಿನಲ್ಲಿ ಸರಾಸರಿ ಆದಾಯ ದಿನಕ್ಕೆ 95 ಸಾವಿರ ಕೋಟಿಗೆ ಏರಿದೆ. ಚಳಿಗಾಲವೇ ಆದಾಯ ಹೆಚ್ಚಳಕ್ಕೆ ಕಾರಣವಂತೆ.

ಬಿಯರ್ ಗೆ ಭಾರೀ ಬೇಡಿಕೆ

ಅದರಲ್ಲಿಯೂ ಚಳಿಗಾಲ ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಬಂದಿದೆ.  ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷದ ನವೆಂಬರ್‌ನಲ್ಲಿ ಬರೋಬ್ಬರಿ 6 ಲಕ್ಷ ಬಿಯರ್ ಬಾಕ್ಸ್‌ಗಳು ಹೆಚ್ಚಾಗಿ ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟ ಆಗುತ್ತಿದೆ. ನವೆಂಬರ್ ತಿಂಗಳಲ್ಲೇ ಬಿಯರ್ ಶೇ.17ರಷ್ಟು ಮಾರಾಟ ಹೆಚ್ಚಳವಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಮಾರಾಟವಾಗಿದ್ದರೆ, ಈ ವರ್ಷ ನವೆಂಬರ್ ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ. ಈ ಮೂಲಕ ಕಳೆದ ವರ್ಷದ ನವೆಂಬರ್‌ಗೆ ಹೋಲಿಕೆ ಮಾಡಿದಲ್ಲಿ 6 ಲಕ್ಷ ಬಿಯರ್ ಬಾಕ್ಸ್ ಮಾರಾಟ ಹೆಚ್ಚಳವಾಗಿದೆ.

ಯಾವ ತಿಂಗಳಲ್ಲಿ ಎಷ್ಟು ಆದಾಯ

1. ಏಪ್ರಿಲ್

  • 2022-23ರಲ್ಲಿ -2,402 ಕೋಟಿ ರೂ.ಆದಾಯ
  • 2023-24ರಲ್ಲಿ -2,304 ಕೋಟಿ ರೂ. ಆದಾಯ

2. ಮೇ

  • 2022-23 -2,339 ಕೋಟಿ ರೂ. ಆದಾಯ
  • 2023-24 -2,607 ಕೋಟಿ ರೂ. ಆದಾಯ

3. ಜೂನ್

  • 2022-23-2,979 ಕೋಟಿ ರೂ. ಆದಾಯ
  • 2023-24- 3,549 ಕೋಟಿ ರೂ. ಆದಾಯ

4. ಜುಲೈ

  • 2022-23- 2,347 ಕೋಟಿ ರೂ. ಆದಾಯ
  • 2023-24 -2,977 ಕೋಟಿ ರೂ. ಆದಾಯ

5. ಆಗಸ್ಟ್

  • 2022-23 -2,251 ಕೋಟಿ ರೂ. ಆದಾಯ
  • 2೦23-24- 2,568 ಕೋಟಿ ರೂ. ಆದಾಯ

6. ಸೆಪ್ಟಂಬರ್

  • 2022-23 2,391 ಕೋಟಿ ರೂ. ಆದಾಯ
  • 2೦23-24 2,599 ಕೋಟಿ ರೂ. ಆದಾಯ

7. ಅಕ್ಟೋಬರ್

  • 2022-23- 2,379 ಕೋಟಿ ರೂ. ಆದಾಯ
  • 2023-24- 2,691 ಕೋಟಿ ರೂ. ಆದಾಯ

8. ನವೆಂಬರ್

  • 2022-23- 2,565 ಕೋಟಿ ರೂ. ಆದಾಯ
  • 2023-24- 2,855 ಕೋಟಿ ರೂ. ಆದಾಯ