ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಣಂತಿ, ಹಸುಗೂಸು ದಾರುಣ ಸಾವು

ಬೆಂಗಳೂರು, ನ.19: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಣಂತಿ, ಹಸುಗೂಸು ದಾರುಣ ಸಾವಾಗಿದೆ. ಬೆಂಗಳೂರಿನ ವೈಟ್​ಫೀಲ್ಡ್​​​ನ ಕಾಡುಗೋಡಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಬಾಣಂತಿ ಹಾಗೂ 9 ತಿಂಗಳ ಹಸುಗೂಸು ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ತಾಯಿ ಸೌಂದರ್ಯ(23), 9 ತಿಂಗಳ ಮಗು ಲೀಲಾ ಮೃತಪಟ್ಟ ತಾಯಿ-ಮಗು. ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮೂವರು ಬೆಸ್ಕಾಂ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೃತ ಸೌಂದರ್ಯ ತಮ್ಮ ಮಗುವಿನ ಜೊತೆಗೆ ತಮಿಳುನಾಡಿನಿಂದ ಬೆಂಗಳೂರಿನ ಮನೆಗೆ ವಾಪಸ್ ಆಗುತ್ತಿದ್ದರು. ಮುಂಜಾನೆ 5 ಗಂಟೆಗೆ ಮನೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಮುಂಜಾನೆ 5 ಗಂಟೆ ವೇಳೆ ಕತ್ತಲಿದ್ದ ಕಾರಣ ರಸ್ತೆ ಬದಿ ಕಟ್ ಆಗಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್​​ ವೈಯರ್​​​ ಕಾಣಿಸದೇ ತುಳಿದಿದ್ದಾರೆ. ಈ ವೇಳೆ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಸ್ಕಾಂನ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.