ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಹಂತಕನ ಚಾಣಾಕ್ಷತೆಗೆ ಪೊಲೀಸರೇ ಶಾಕ್

ಉಡುಪಿ, (ನವೆಂಬರ್ 14): ನಉಡುಪಿಯ ನೇಜಾರಿನ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನ ಚಾಣಾಕ್ಷತನ ಕಂಡು ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ಹೌದು..ಆರೋಪಿ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಸಿಳಿವು ಸಿಗದಂತೆ ಉಡುಪಿ ನಗರದೊಳಗೆ ನಾಲ್ಕು ಬಾರಿ ವಾಹನ ಬದಲಾಯಿಸಿ ಪರಾರಿಯಾಗಿದ್ದಾನೆ. ಇದರಿಂದ ಆರೋಪಿಯನ್ನು ಕಂಡುಹಿಡಿಯಲು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಇದೀಗ ಕೊನೆ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಕೊಲೆಗಾರನ ಪತ್ತೆಗೆ ಬಲೆ ಬೀಸಿದ್ದಾರೆ.

ದುಷ್ಕರ್ಮಿಯೊಬ್ಬ ನವೆಂಬರ್ 12ರಂದು ಮನೆಗೆ ನುಗ್ಗಿ ನಾಲ್ವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಈಗಾಗಲೇ ಹಂತಕನ ಬಂಧನಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಐದು ತಂಡಗಳನ್ನು ರಚಿಸಿದ್ದು, ಹತ್ಯೆಯಾದ ಅಯ್ನಾಸ್ ಮತ್ತು ಅಫ್ನಾನ್ ಕಾಲ್ ಡೀಟೇಲ್ಸ್ ಆಧಾರದಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ. ಕೊಲೆಗೆ ಆರ್ಥಿಕ ವ್ಯವಹಾರ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಆದ್ರೆ, ಈವರೆಗೆ ಪೊಲೀಸರಿಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ.

ಸಿಸಿ ಕ್ಯಾಮರಾ ಫೂಟೇಜ್ ಹೊರತುಪಡಿಸಿ ಬೇರೆ ಯಾವುದೇ ಸುಳಿವು ಪೋಲಿಸರಿಗೆ ಸಿಕ್ಕಿಲ್ಲ. ಸಾಕಷ್ಟು ಸಿಸಿಟಿವಿ ಫೋಟೇಜ್ ಸಿಕ್ಕರು ಆರೋಪಿಯ ಪತ್ತೆ ಮಾಡಲು ಪೊಲೀಸರಿಂದ ಸಾಧ್ಯವಾಗಿಲ್ಲ. ಹೀಗಾಗಿ ಪೊಲೀಸರು ಅಕ್ಕ ಪಕ್ಕದ ಜಿಲ್ಲೆಗಳಲ್ಲಿಯೂ ತನಿಖೆ ಚುರುಕುಗೊಳಿಸಿದ್ದಾರೆ.

ಮಹಿಳೆ ಡಿಸ್ಷಾರ್ಜ್

ನಾಲ್ವರ ಕಗ್ಗೊಲೆ ಘಟನೆಯಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಹಾಜಿರಾ ಎನ್ನುವ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನವೆಂಬರ್ 12ರಂದು ಹಾಜಿರಾ ಸಹ ದುಷ್ಕರ್ಮಿ ಎರಡು ಕಡೆ ಚಾಕು ಇರಿದು ಪರಾರಿಯಾಗಿದ್ದ. ಇದೀಗ ಚಿಕತ್ಸೆ ಪಡೆದು ಮಣಿಪಾಲ ಕೆ.ಎಂಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರ ಸೂಚನೆ ನೀಡಿದ್ದಾರೆ.