ಗದಗ, ಅ.21: ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿಗೆ ಸಂಜೀವಿನಿ ಆದ ಗದಗ ಜಿಮ್ಸ್ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟಾಗಿದೆ. ಡಯಾಲಿಸಸ್ ವಿಭಾಗದಲ್ಲಿ ವೈದ್ಯರಿಲ್ಲದೇ ರೋಗಿಗಳ ನರಳಾಡುವಂತಾಗಿದೆ. ಗಂಭೀರ ಸ್ವರೂಪದ ಡಯಾಲಿಸಸ್ ರೋಗಿಗಳು ನಿತ್ಯ ಜಿಮ್ಸ್ಗೆ ಆಗಮಿಸುತ್ತಾರೆ. ಆದ್ರೆ, ಇಲ್ಲಿನ ಅವ್ಯವಸ್ಥೆ ವಿಲವಿಲ ಎನ್ನುವಂತಾಗಿದೆ. ವೆಂಟಿಲೇಟರ್ ವ್ಯವಸ್ಥೆ ಇಲ್ಲ, ಡ್ಯೂಟಿ ಡಾಕ್ಟರ್ ಇರಲ್ಲ. ಸ್ವಲ್ಪ ಹೆಚ್ಚುಕಮ್ಮಿಯಾದರೂ ದೇವರೇ ಕಾಪಾಡಬೇಕು ಎಂದು ಡಯಾಲಿಸಸ್ ರೋಗಿಗಳು ಸಿಡಿಮಿಡಿಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆ ಅಂದ್ರೆ, ಬಡ ರೋಗಿಗಳ ಪಾಲಿನ ಸಂಜೀವನಿ ಎನ್ನುತ್ತಾರೆ. ಆದ್ರೆ, ಇಲ್ಲಿ ಬರುವ ಬಡ ರೋಗಿಗಳಿಗೆ ನಾವು ಮನೆಗೆ ಜೀವಂತವಾಗಿ ಹೋಗುತ್ತೀವಾ ಎನ್ನುವ ಅನುಮಾನ ಕಾಡತೊಡಗಿದೆ. ಜಿಮ್ಸ್ ಆಡಳಿತದ ನಿರ್ಲಕ್ಷ್ಯಕ್ಕೆ ಅಕ್ಷರಶಃ ರೋಗಿಗಳು ನರಳಾಡುವಂತಾಗಿದೆ. ಹದಗೆಟ್ಟ ವ್ಯವಸ್ಥೆ ವಿರುದ್ಧ ಡಯಾಲಿಸಸ್ ರೋಗಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಇನ್ನು ಆಸ್ಪತ್ರೆಯ ಡಯಾಲಿಸ್ ವಿಭಾಗದಲ್ಲಿ ವೆಂಟಿಲೇಟರ್ಗಳು ಮಾಯವಾಗಿವೆ. ಡ್ಯೂಟಿ ವೈದ್ಯರು ಇರುವುದಿಲ್ಲವಂತೆ. ಇಲ್ಲಿ ಟೆಕ್ನಿಷಿಯನ್ಗಳು ಎಲ್ಲಾ ಆಗಿದ್ದಾರೆ. ಡಯಾಲಿಸಸ್ ರೋಗಿಗಳ ಸ್ಥಿತಿ ಗಂಭೀರವಾಗಿರುತ್ತೆ. ಎದ್ದು ಕೂರಲು ಆಗಲ್ಲ. ಹೀಗಿರುವಾಗ ಇಲ್ಲಿ ಕನಿಷ್ಠ ವ್ಹೀಲ್ಚೇರ್ಗಳು ಇಲ್ಲ.ಇಷ್ಟೊಂದು ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ ಎಂದು ರೋಗಿಗಳ ಸಂಬಂಧಿಕರು ಕಿಡಿಕಾರಿದ್ದಾರೆ. ಡಯಾಲಿಸಿಸ್ ಮಾಡುವಾಗ ಹೆಚ್ಚುಕಮ್ಮಿಯಾದರೆ, ತಕ್ಷಣ ಚಿಕಿತ್ಸೆಗೆ ವೈದ್ಯರೇ ಇರಲ್ಲವಂತೆ. ತುರ್ತು ಚಿಕಿತ್ಸಾ ಘಟಕಕ್ಕೆ ರೋಗಿಗಳನ್ನು ಕರೆದ್ಯೊಯಬೇಕು. ಅಷ್ಟರಲ್ಲೇ ಜೀವಕ್ಕೆ ಅಪಾಯವಾದರೆ, ಹೊಣೆ ಯಾರೂ ಎಂದು ರೋಗಿಗಳು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಚಿಕಿತ್ಸೆಗೆ ಬಂದ ರೋಗಿಗಳ ಸ್ಥಿತಿ ದೇವರೇ ಬಲ್ಲ ಎಂಬಂತಾಗಿದೆ.
ಕೆಲ ಬಾರಿ ಡಯಾಲಿಸ್ ಮಾಡುವಾಗ ರೋಗಿಗಳ ಆರೋಗ್ಯದಲ್ಲಿ ಏರುಪೇರಾಗಿ ಗಂಭೀರ ಸ್ಥಿತಿ ಆಗುತ್ತಂತೆ. ಆದ್ರೆ, ಇಲ್ಲಿ ವೈದ್ಯರೇ ಇರಲ್ಲ. ಏನಾದ್ರೂ ಆದರೆ ಹೊಸ ಕಟ್ಟಡದಲ್ಲಿರುವ ತುರ್ತುಚಿಕಿತ್ಸೆ ಘಟಕಕ್ಕೆ ಕರೆದ್ಯೊಯಬೇಕು. ಅಷ್ಟೇ ಅಲ್ಲ ಆಕ್ಸಿಜನ್ ಕೂಡ ಇರಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ. ಹೀಗಾಗಿ ಬಡವರ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಜನರು ಕಿಡಿಕಾರಿದ್ದಾರೆ. ಇನ್ನೂ ಡಯಾಲಿಸಸ್ ವಿಭಾಗಲ್ಲಿ ಮೂರು ಎಸಿ ಯಂತ್ರಗಳು ಕೆಟ್ಟು ನಿಂತಿವೆ. ಇದರಿಂದ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹೊಟ್ಟೆಯಲ್ಲಿ ಸಂಕಟ ತಡೆದುಕೊಳ್ಳಲು ಆಗುತ್ತಿಲ್ಲ. ಕನಿಷ್ಠ ಫ್ಯಾನ್ ಕೂಡ ಸರಿಯಾಗಿ ತಿರುಗಲ್ಲ. ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ.
ಇಲ್ಲಿನ ಅವ್ಯವಸ್ಥೆ, ವೈದ್ಯರ ನಿರ್ಲಕ್ಷ್ಯಕ್ಕೆ ನನ್ನ ಕಣ್ಮುಂದೆಯೇ ಎರಡ್ಮೂರು ಸಾವು ನೋವುಗಳು ಸಂಭವಿಸಿವೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ. ಡಯಾಲಿಸಸ್ ಯುನಿಟ್ನಲ್ಲಿ ವೈದ್ಯರೇ ನಾಪತ್ತೆಯಾಗಿದ್ದಾರೆ. ಸರ್ಕಾರ ಬಡ ರೋಗಿಗಳಿಗೆ ಅನಕೂಲ ಆಗಲಿ ಎಂದು ಕೋಟಿ ಖರ್ಚು ಮಾಡಿದರೂ ಗದಗ ಜಿಮ್ಸ್ ನಲ್ಲಿ ಬಡ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ನಿತ್ಯವೂ ಒಂದಿಲ್ಲೊಂದು ಯಡವಟ್ಟು, ಅದ್ವಾನಗಳು ಆಗುತ್ತಿದ್ದರೂ ಜಿಮ್ಸ್ ಆಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ದೊಡ್ಡ ದುರಂತ ಆಗಿ ಜನರು ರೊಚ್ಚಿಗೆಳುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಂಡು ಜಿಮ್ಸ್ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಬೇಕಿದೆ.