ಅಂಕೋಲಾ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ನಾಗರಹಾವಿಗೆ ಹೊಲಿಗೆ

ಅಂಕೋಲಾ: ಗಾಯಗೊಂಡ ನಾಗರಹಾವಿಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ ಅಪರೂಪದ ಘಟನೆಗೆ ಅಂಕೋಲಾ ತಾಲೂಕಿನ ಪಶು ವೈದ್ಯಕೀಯ ಆಸ್ಪತ್ರೆ ಸಾಕ್ಷಿಯಾಗಿದೆ.
ಪಶು ವೈದ್ಯ ಆಸ್ಪತ್ರೆಯಲ್ಲಿ ಕೋಳಿ, ಕುರಿ, ನಾಯಿ, ಆಕಳು, ಎಮ್ಮೆ ಮತ್ತಿತರ ಸಾಕು ಪ್ರಾಣಿಗಳು ಮತ್ತು ಸಂದರ್ಭಕ್ಕನುಗುಣವಾಗಿ ನಾಡಿನ ಹಾಗೂ ಕಾಡಿನ ಬೇರೆ ಬೇರೆ ಪಶು ಪಕ್ಷಿಗಳಿಗೆ ಚಿಕಿತ್ಸೆ ಮತ್ತು ಶುಶ್ರೂಷೆ ನೀಡಲಾಗುತ್ತಿದೆ.


ಬಲು ಅಪರೂಪದ ಘಟನೆ ಎಂಬಂತೆ, ಉರಗ ಸಂರಕ್ಷಕರೋರ್ವರ ಕೋರಿಕೆ, ಸಹಕಾರ ಮತ್ತು ಮಾರ್ಗದರ್ಶನನದ ಮೇರೆಗೆ ನಾಗರ ಹಾವಿಗೂ ಚಿಕಿತ್ಸೆ ನೀಡಿ ತಮ್ಮ ಸೇವಾ ಮನೋಭಾವನೆ ಮೂಲಕ ವೈದ್ಯರು ಮತ್ತು ಸಿಬ್ಬಂದಿಗಳು ಇತರರಿಗೂ ಮಾದರಿ ಆಗಿದ್ದಾರೆ.

ತಾಲೂಕಿನ ಗ್ರಾಮೀಣ ಪ್ರದೇಶಲ್ಲಿ ಖಾಸಗಿ ಜಮೀನಿನಲ್ಲಿ ಜೆಸಿಬಿ ಯಂತ್ರ ಬಳಸಿ ಕೆಲಸ ಮಾಡುತ್ತಿದ್ದ ವೇಳೆ, ಆಕಸ್ಮಿಕವಾಗಿ ಅಲ್ಲಿಯೇ ಇದ್ದ ನಾಗರ ಹಾವೊಂದು ಗಾಯಗೊಂಡಿದೆ. ಅದನ್ನು ಗಮನಿಸಿದ ಸ್ಥಳೀಯರು ಉರಗ ಸಂರಕ್ಷಕ ಮಹೇಶ ನಾಯ್ಕರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮಹೇಶ ನಾಯ್ಕ, ಗಾಯಗೊಂಡು ನಿತ್ರಾಣವಾಗಿದ್ದ ಹಾವಿಗೆ ಸ್ಥಳೀಯರ ಸಹಕಾರದಲ್ಲಿ ನೀರು ಕುಡಿಸಿ, ಲಘು ಉಪಚಾರ ನೀಡಿದ್ದಾರೆ. ಬಳಿಕ ಅದನ್ನು ಅಂಕೋಲಾ ಪಶುವೈದ್ಯ ಆಸ್ಪತ್ರೆಗೆ ಒಯ್ದು, ಟೇಬಲ್ ಮೇಲಿಟ್ಟು, ಚೀಲ ಬಿಡಿಸಿ ಹಾವು ಹೊರ ಬರುವಂತೆ ಮಾಡಿದ್ದಾರೆ.

ಪ್ಲಾಸ್ಟಿಕ ಪೈಪ್ ನಲ್ಲಿ ಹಾವು ನಿಧಾನವಾಗಿ ಮುಖ ತೂರಿಸಿ ಮುಂದೆ ಹೋಗುವಂತೆ ಮಾಡಿ, ಸ್ಥಳೀಯ ಸಿಬ್ಬಂದಿಗಳ ಜೊತೆ ತಾವೂ ಕೈ ಜೋಡಿಸಿ, ವೈದ್ಯರು ಹಾವಿನ ಗಾಯವಾದ ಭಾಗ ಶುಚಿಗೊಳಿಸಿ, ಹೊಲಿಗೆ ಹಾಕಿ, ಮುಲಾಂ ಲೇಪಿಸಲು ಸಹಕರಿಸಿದ್ದಾರೆ. ಈ ಚಿಕಿತ್ಸಾ ಪ್ರಕ್ರಿಯೆಗೆ ಸುಮಾರು 20-30 ನಿಮಿಷ ಕಾಲಾವಧಿ ತೆಗೆದುಕೊಂಡಿದೆ. ಆದರೂ ವಿಷಕಾರಿ ನಾಗರಹವು ಪ್ರತಿರೋಧ ತೋರದೇ, ಜೀವ ರಕ್ಷಣೆಯ ಉದ್ದೇಶಕ್ಕೆ ಇವರು ಹೀಗೆ ಮಾಡುತ್ತಿದ್ದಾರೆ ಎಂಬುದು ಅರಿತಂತೆ ಕಾಣುತ್ತದೆ.


ಪಶುವೈದ್ಯ ಆಸ್ಪತ್ರೆಯಲ್ಲಿ ಕಂಡು ಬಂದ ಬಲೂ ಅಪರೂಪದ ಘಟನೆಗೆ ಹಲವು ಸಾರ್ವಜನಿಕರು ಸಾಕ್ಷಿಯಾದರು. ಅಂಕೋಲಾ ಪಶುವೈದ್ಯ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆಯ ನಡುವೆಯೂ ಈ ಹಿಂದಿನಿಂದಲೂ ಉತ್ತಮ ಸೇವಾ ಕಾರ್ಯ ಕೈಗೊಳ್ಳುತ್ತಾ ಬರಲಾಗಿದೆ.
ಅಂಕೋಲಾ ಪಶುವೈದ್ಯ ಆಸ್ಪತ್ರೆಯ ಶ್ರೀನಿವಾಸ್ ಪಾಟೀಲ್, ರಾಘವ, ಅವಿನಾಶ, ಶ್ಯಾಮ ಮತ್ತಿತರರ ಸೇವೆ ಹಾಗೂ ಉರಗ ಸಂರಕ್ಷಕ ಮಹೇಶ ನಾಯ್ಕರ ವಿಶೇಷ ಪ್ರಯತ್ನ ಮತ್ತು ಸಹಕಾರಕ್ಕೆ ತಾಲೂಕಿನ ಪ್ರಜ್ಞಾವಂತ ಜನತೆ ಮೆಚ್ಚುಗೆ ಸೂಚಿಸಿದ್ದಾರೆ.