ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಬೆಂಕಿಯನ್ನು ಶಮನ ಮಾಡುವ ಕೆಲ ಸುರಕ್ಷಿತ ಮತ್ತು ತುರ್ತು ಕ್ರಮಗಳ ಕುರಿತು ವಿಶೇಷ ಕಾರ್ಯಾಗಾರ

ಅಂಕೋಲಾ : ಹಸಿರೇ ಉಸಿರು ಎನ್ನುವಂತೆ ಗಿಡ -ಮರಗಳಿದ್ದರೆ ಮಾತ್ರ ಮನುಷ್ಯ ಸೇರಿದಂತೆ ಇತರೆ ಪ್ರಾಣಿ , ಪಕ್ಷಿ ಮತ್ತಿತರ ಜೀವ ಸಂಕುಲಗಳು ಬದುಕುಳಿಯಲು ಸಾಧ್ಯ. ಆದ್ದರಿಂದ ಅರಣ್ಯ ಮತ್ತು ಹಸಿರು ಪರಿಸರ ಸಂರಕ್ಷಣೆಯ ಜವಾಬ್ದಾರಿ ಈ ಮೊದಲಿಗಿಂತಲೂ ಹೆಚ್ಚಿದ್ದು, ಅರಣ್ಯ ಇಲಾಖೆ ಹಸರೀಕರಣದ ಉಳಿವು ಮತ್ತು ಬೆಳೆಸುವಿಕೆಗೆ ನಾನಾ ರೀತಿಯ ಪ್ರಯತ್ನ ಮುಂದುವರೆಸಿದೆ.ಕೆಲವೊಮ್ಮೆ ದಟ್ಟಾರಣ್ಯದಲ್ಲಿ ಮರದ ಕೊಂಬೆಗಳ ಪರಸ್ಪರ ಘರ್ಷಣೆ ಇಲ್ಲವೇ ಇನ್ನಿತರೇ ಕಾರಣಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡು, ನಂತರ ಎಲ್ಲಡೆ ಹಬ್ಬಿ ಅರಣ್ಯ ಮತ್ತು ಅನೇಕ ಜೀವ ಸಂಕುಲಯಗಳು ಸುಟ್ಟಿ ಕರಕಲಾಗುತ್ತದೆ.ಕೆಲವೊಮ್ಮೆ ಸಾರ್ವಜನಿಕರು ದುರುದ್ದೇಶಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ಇಡುವುದು,ದಾರಿ ಹೋಕರು ಬಿಡಿ ಸಿಗರೇಟ್ ಗಳ ದಮ್ಮ ಎಳೆದು,ಉಳಿಕೆ ಭಾಗವನ್ನು ಎಸೆದು ಹೋದಾಗ,ಮತ್ತಿತರೆ ಕಾರಣಗಳಿಂದಲೂ ಆಗಾಗ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಗಿಡ ಮರಗಳು ಸುಟ್ಟುಹೋದ ನಿದರ್ಶನಗಳಿವೆ.ಈ ವೇಳೆ ಬೆಂಕಿ ಶಮನ ಮಾಡುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿದ್ದು, ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕೆಲ ಸುರಕ್ಷಿತ ಮತ್ತು ತುರ್ತು ಕ್ರಮಗಳ ಕುರಿತು ಅಂಕೋಲಾ ಉಪ ವಿಭಾಗ ಅಂಕೋಲಾದಲ್ಲಿ ವಿಶೇಷ ಕಾರ್ಯಾಗಾರ ಹಮ್ಮಿಕೊಂಡು, ಅಣಕುಕೆಲ ಸುರಕ್ಷಿತ ಮತ್ತು ತುರ್ತು ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳುವಳಿಕೆ ನೀಡಲಾಯಿತು.. ಒಣ ಹುಲ್ಲು, ತರಲೆಗಳಿಗೆ ಸಣ್ಣ ಪ್ರಮಾಣದ ಬೆಂಕಿ ತಗುಲಿದಾಗ,ಗಾಳಿಗೆ ವಿರುದ್ಧ ದಿಸೆಯಲ್ಲಿ ಸೊಪ್ಪುಗಳನ್ನು ಬಳಸಿ ಬೆಂಕಿ ಆರಿಸುವುದು,ಎತ್ತರದ ಮರಕ್ಕೆ ಬೆಂಕಿ ತಗುಲಿದಾಗ ಹಾಗೂ ವಿಶಾಲ ಪ್ರದೇಶಗಳಲ್ಲಿ ಬೆಂಕಿ ಹರಡಿಕೊಳ್ಳುತ್ತಿರುವಾಗ,ನೀರನ್ನು ಯಾವೆಲ್ಲ ರೀತಿ ಸಿಂಪಡಿಸಬಹುದು ಎಂಬಿತ್ಯಾದಿ ಪ್ರಾತ್ಯಕ್ಷಿಕೆಗಳನ್ನು ತೋರ್ಪಡಿಸಲಾಯಿತು. ಹೊಸಗದ್ದೆ ವಿ ಎಫ್ ಸಿ ವ್ಯಾಪ್ತಿಯಲ್ಲಿಯೂ ಕೆಲ ಪ್ರಾತ್ಯಕ್ಷಿಕೆಗಳನ್ನು ನೀಡಿ,ಅರಣ್ಯ ಸಿಬ್ಬಂದಿಗಳಿಗೆ ಬೆಂಕಿ ಶಮನದ ಕುರಿತು ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎ ಸಿ ಎಫ್ ಕೃಷ್ಣ ಅಣ್ಣಯ್ಯ ಗೌಡ , ಬೇಸಿಗೆ ಕಾಲ ಹತ್ತಿರ ಬರುತ್ತಿದ್ದು, ನಾನಾ ಕಾರಣಗಳಿಂದ ಅರಣ್ಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು,ಅರಣ್ಯ ಸುಟ್ಟು ಹೋಗುವ ಸಾಧ್ಯತೆ ಇರುವುದರಿಂದ, ಹಾಗಾಗುವುದನ್ನು ತಡೆಯಲು ಸಾಕಷ್ಟು ಮುಂಚಿತವಾಗಿ ನಮ್ಮೆಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕುರಿತು ಮುಂಜಾಗ್ರತೆ ವಹಿಸುತ್ತಿದ್ದೇವೆ.ಸಾರ್ವಜನಿಕರು ಸಹ ಇಲಾಖೆ ಜೊತೆ ಕೂಡಿಕೊಂಡು , ಅರಣ್ಯ ಸಂಪತ್ತು ನಾಶವಾಗದಂತೆ ಮತ್ತು ನಮ್ಮ ತಾಲೂಕು ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸದಂತೆ ಸಹಕಾರ ನೀಡುವಂತೆ ಮನವಿ ಮಾಡಿದರು. ತಾಲೂಕಿನ ವಿವಿಧ ವಲಯಗಳ ಅರಣ್ಯ ಅಧಿಕಾರಿಗಳಾದ ಗಣಪತಿ ವಿ ನಾಯಕ ಅಂಕೋಲಾ, ಸುರೇಶ ನಾಯ್ಕ ಹೊಸಕಂಬಿ, ರಾಘವೇಂದ್ರ ಮಲ್ಲಪ್ಪನವರ ರಾಮನಗುಳಿ , ಭವ್ಯಾ ನಾಯಕ ಸೀಬರ್ಡ್ ವಲಯ, ಮಾಸ್ತಿಕಟ್ಟಾ ವಲಯ ಸೇರಿದಂತೆ ಎಲ್ಲಡೆಯ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ವನಪಾಲಕರು ಹಾಗೂ ಅರಣ್ಯ ವೀಕ್ಷಕರು ಹಾಜರಿದ್ದರು. ಅಂಕೋಲಾ ಅಗ್ನಿಶಾಮಕ ಪ್ರಭಾರಿ ಠಾಣಾಧಿಕಾರಿ ಗಜಾನನ ನಾಯ್ಕ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ವಿವಿಧ ಪ್ರಾತ್ಯಕ್ಷಿಕೆ ಮೂಲಕ ಅಗ್ನಿ ಶಮನದ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು. ಇದು ಕೇವಲ ಇಲಾಖೆಗಳ ಕೆಲಸ ಎಂದು ಸುಮ್ಮನಾಗದೇ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹ ಹಸಿರು ಪರಿಸರ ನಾಶವಾಗದಂತೆ ಇಲಾಖೆ ಜೊತೆ ಸಹಕರಿಸಬೇಕಿದೆ.